ಬೆಂಗಳೂರು: 2022-23 ಮುಂಗಾರು ಹಂಗಾಮಿನಲ್ಲಿ ನೆಟೆ ರೋಗದಿಂದ ಹಾನಿಯಾದ ತೊಗರಿ ಬೆಳೆಗೆ ಮೊದಲ ಹಂತದ ಪರಿಹಾರವಾಗಿ 74 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. 2022-23ನೇ ಸಾಲಿನಲ್ಲಿ ನೆಟೆ ರೋಗದಿಂದ ಕಲಬುರಗಿ ಜಿಲ್ಲೆಯಲ್ಲಿ 1,98,488 ಹೆಕ್ಟೇರ್, ಬೀದರ್ ಜಿಲ್ಲೆಯಲ್ಲಿ 14,495 ಹೆಕ್ಟೇರ್, ವಿಜಯಪುರ ಜಿಲ್ಲೆಯಲ್ಲಿ 20,401 ಹೆಕ್ಟೇರ್, ಯಾದಗಿರಿ ಜಿಲ್ಲೆಯಲ್ಲಿ 10,259 ಪ್ರದೇಶದಲ್ಲಿ ತೊಗರಿ ಬೆಳೆ ಹಾನಿಯಾಗಿರುತ್ತದೆ. ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್ 10 ಸಾವಿರ ಪರಿಹಾರದಂತೆ ಗರಿಷ್ಠ ಎರಡು ಹೆಕ್ಟೇರ್‌ಗೆ ಸೀಮಿತಗೊಳಿಸಿ ಸರ್ಕಾರದಿಂದ 223 ಕೋಟಿಗಳ ಅನುದಾನ ಘೋಷಿಸಲಾಗಿದೆ. ಇದರ ಪೈಕಿ ಮೊದಲ ಹಂತದಲ್ಲಿ 1/3 ಭಾಗದಷ್ಟು, ಅಂದರೇ 74 ಕೋಟಿ ರೂಪಾಯಿ ಪರಿಹಾರ ಹಣವನ್ನು ಸಾದಿಲ್ವಾರು ನಿಧಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನೆಟೆರೋಗದಿಂದ ತೊಗರಿ ಬೆಳೆಹಾನಿಯಿಂದ ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರದ ಹಣ ವಿತರಿಸಲಾಗುವುದು. ಉಳಿದ ಪರಿಹಾರದ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
70 ಸಾವಿರ ಹಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ: ಕಲಬುರಗಿ ಜಿಲ್ಲೆಯಲ್ಲಿ 2022ರಲ್ಲಿ ಸುಮಾರು 4.47 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು, ಕಳೆದ ವರ್ಷ ಬಂದ ಮಳೆಯಿಂದ 1.29 ಲಕ್ಷ ಹೆಕ್ಟೇರ್ ಪ್ರದೇಶದ ತೊಗರಿ ಬೆಳೆ ನಾಶವಾಗಿದೆ. 3.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆದು ನಿಂತಿತ್ತು. ಆದರೆ, ನೆಟೆ ರೋಗದಿಂದಾಗಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಒಣಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿತ್ತು. ಅದರಂತೆ ನೆರೆಯ ಯಾದಗಿರಿ ಮತ್ತು ಬೀದರ್ ಜಿಲ್ಲೆಯಲ್ಲಿ ಅಂದಾಜು ತಲಾ 10 ಸಾವಿರ ಹೆಕ್ಟೇರ್ನಂತೆ ಒಟ್ಟು 20 ಸಾವಿರ ಹೆಕ್ಟೇರ್ನಲ್ಲಿ ಬೆಳೆಹಾನಿಯಾಗಿತ್ತು. ಮೂರು ಜಿಲ್ಲೆಗಳು ಸೇರಿ ಒಟ್ಟು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ ಬೆಳೆ ಒಣಗಿತ್ತು ಎಂದು ಕೃಷಿ ಇಲಾಖೆ ವರದಿ ನೀಡಿತ್ತು.
ಇದನ್ನೂ ಓದಿ : 'ನಾನು ಮೃತ ಕೊರೊನಾ ವಾರಿಯರ್ ಪತ್ನಿ, ಬದುಕಿದ್ದೇನೆ ಬದುಕಲು ಬಿಡಿ'; ಪರಿಹಾರ ನಿಧಿಗಾಗಿ ರಾಯಚೂರು ಡಿಸಿ ಕಚೇರಿ ಮುಂದೆ ಪತ್ನಿಯ ಪ್ರತಿಭಟನೆ