ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ಆರ್ ಪಿ)ಯಲ್ಲಿ ಮುಂಬಡ್ತಿ ಪರ್ವ ಮುಂದುವರೆದಿದೆ. ಇಂದು ಸಹ 714 ಮಂದಿ ಕಾನ್ಸ್ಟೇಬಲ್ಗಳು ಹೆಡ್ ಕಾನ್ಸ್ಟೇಬಲ್ಗಳಾಗಿ ಮುಂಬಡ್ತಿ ಪಡೆಯಲಿದ್ದಾರೆ.
ಕೋರಮಂಗಲದ ನಾಲ್ಕನೇ ಬೆಟಾಲಿಯನ್ ಆವರಣದಲ್ಲಿ ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ್ ರಾವ್ ಬಡ್ತಿ ಪ್ರಮಾಣಪತ್ರ ವಿತರಿಸಲಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ಪ್ರಮೋಷನ್ ಸಿಗದೆ ಕಂಗಲಾಗಿದ್ದ ಸಿಬ್ಬಂದಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದಾರೆ.
ಬೆಂಗಳೂರು, ತುಮಕೂರು, ಹಾಸನ, ಮೈಸೂರು, ಬೆಳಗಾವಿ, ಕಲಬುರಗಿ ಸೇರಿದಂತೆ 16 ಕೆಎಸ್ಆರ್ ಪಿ ಪಡೆಗಳು, ಎರಡು ಇಂಡಿಯನ್ ರಿಸರ್ವ್ ಪೊಲೀಸ್ (ಐಆರ್ ಬಿ) ಹಾಗೂ ಮುನಿರಾಬಾದ್ ಮತ್ತು ವಿಜಯಪುರದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್ಟೇಬಲ್ಗಳು ಬಡ್ತಿಗೆ ಅರ್ಹರಾಗಿದ್ದು, ಈ ಪೈಕಿ ಸೇವಾ ಹಿರಿತನ ಹೊಂದಿರುವ 714 ಕಾನ್ಸ್ಟೇಬಲ್ ಗಳಿಗೆ ಬಡ್ತಿ ಸಿಗಲಿದೆ.
ಬಡ್ತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲು ಯೋಜನೆ ರೂಪಿಸಿಕೊಂಡಿರುವ ಕೆಎಸ್ಆರ್ ಪಿ ಈ ನಿಟ್ಟಿನಲ್ಲಿ ಕಚೇರಿಯ ಒಳ ಹಾಗೂ ಹೊರಭಾಗದಲ್ಲಿ ಎಲ್ಇಡಿ ಸ್ಕ್ರೀನ್ ಗಳನ್ನು ಅಳವಡಿಸಲಾಗುವುದು. ಈ ಮೂಲಕ ಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ಲಾಬಿಗೆ ಅವಕಾಶ ಇಲ್ಲವೆಂದು ಸಂದೇಶ ಸಾರಲು ಮುಂದಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿವೆ, ಎಲ್ಲಿ ತೆರವಾಗಿದೆ ಅನ್ನೋದನ್ನು ಬಡ್ತಿ ಪಡೆಯುವವರು ಹೊರಗಿನಿಂದಲೇ ಬಿಗ್ ಸ್ಕ್ರೀನ್ ಮೂಲಕ ವೀಕ್ಷಿಸಬಹುದಾಗಿದೆ.
ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಮುಂಬಡ್ತಿಗೆ ಅರ್ಹರಾದ ಸಿಬ್ಬಂದಿಗೆ ಬಡ್ತಿ ಭಾಗ್ಯ ಸಿಕ್ಕಿರಲಿಲ್ಲ. ಇದರಿಂದ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ, ಬಿ.ಕೆ. ಪವಿತ್ರ ಅರ್ಜಿ ಪ್ರಕರಣ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ ತೀರ್ಪು ಬಡ್ತಿಗೆ ಅಡ್ಡಿಯಾಗಿ ಪರಿಣಮಿಸಿತ್ತು. ಇವೆಲ್ಲ ಕಾರಣಗಳಿಂದಾಗಿ ನಿಯಾಮನುಸಾರ ಹಾಗೂ ಜೇಷ್ಠತಾ ಆಧಾರದ ಮೇಲೆ ಸಿಬ್ಬಂದಿಗೆ ಮುಂಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ.
ಸದ್ಯ ಎದುರಾಗಿದ್ದ ಸಮಸ್ಯೆಗಳು ದೂರವಾಗುತ್ತಿದ್ದಂತೆ ಈ ಹಿಂದೆ 58 ಮಂದಿಗೆ ಎಸ್ಐಯಿಂದ ಪಿಎಸ್ಐ, 89 ಫಾಲೋವರ್ ಯಿಂದ ಫಾಲೋವರ್ ದಫೇದಾರ್ ಹಾಗೂ 504 ಹೆಡ್ ಕಾನ್ಸ್ಟೇಬಲ್ ಹುದ್ದೆಯಿಂದ ಎಎಸ್ಐ ಆಗಿ ಬಡ್ತಿ ಭಾಗ್ಯ ಕಲ್ಪಿಸಲಾಗಿತ್ತು. ಇದೀಗ ಕಾನ್ಸ್ಟೇಬಲ್ ಯಿಂದ ಹೆಡ್ ಕಾನ್ಸ್ಟೇಬಲ್ ಆಗಿ 714 ಮಂದಿಗೆ ಬಡ್ತಿ ನೀಡಲಾಗುತ್ತಿದೆ. ಈ ಮೂಲಕ ಕೆಎಸ್ಆರ್ ಪಿಯು ಕಳೆದ ಎರಡು ತಿಂಗಳ ಅಂತರದಲ್ಲಿ ಒಟ್ಟು 1366 ಸಿಬ್ಬಂದಿಗೆ ಪ್ರಮೋಷನ್ ಕೊಟ್ಟಂತಾಗಲಿದೆ.