ಬೆಂಗಳೂರು : ಲಾಕ್ಡೌನ್ ಹಿನ್ನೆಲೆ ಜಪ್ತಿ ಮಾಡಿಕೊಂಡಿದ್ದ ವಾಹನಗಳನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶದಂತೆ ದಿನಾಂಕದ ಆಧಾರದ ಮೇಲೆ ಪೊಲೀಸರು ವಾಪಾಸ್ ನೀಡ್ತಿದ್ದಾರೆ. ನಿನ್ನೆ ಒಂದೇ ದಿನದಲ್ಲಿ 2024 ವಾಹನಗಳ ಮೇಲೆ 5287 ಕೇಸ್ ದಾಖಲಿಸಿ ₹18. 61ಲಕ್ಷ ದಂಡ ಸಂಗ್ರಹ ಮಾಡಿದ್ದಾರೆ.
ಅನಗತ್ಯ ಓಡಾಟ ಮಾಡಿ ಪೊಲೀಸರ ಕೈಗೆ ವಾಹನ ಸವಾರರು ಸಿಕ್ಕಿಬಿದ್ದಿದ್ದರು. ಹೀಗಾಗಿ ವಾಹನಗಳ ಮೇಲೆ (NDMA ) ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ಕೂಡ ದಾಖಲಿಸಲಾಗಿತ್ತು. ಸದ್ಯ ವಾಹನ ಸವಾರರಿಗೆ ವಾಹನಗಳನ್ನ ನೀಡುವಂತೆ ಸರ್ಕಾರ ಆದೇಶ ನೀಡಿದ ಹಿನ್ನೆಲೆ ಹೈಕೋರ್ಟ್ ಆದೇಶದ ಮೇರೆಗೆ ದಂಡ ಸಂಗ್ರಹಿಸಿಕೊಂಡು ವಾಹನ ಬಿಡುಗಡೆ ಮಾಡುತ್ತಿದ್ದಾರೆ.
ಆಯಾ ಠಾಣಾ ವ್ಯಾಪ್ತಿಗಳಲ್ಲಿ ವಾಹನಗಳ ದಾಖಲಾತಿಗಳ ಪರಿಶೀಲನೆ ನಡೆಸಿದ ನಂತರ ವಾಹನ ಹಸ್ತಾಂತರ ಮಾಡಲಾಗುತ್ತಿದೆ. ಒಂದು ವೇಳೆ ಸರಿಯಾದ ದಾಖಲಾತಿಗಳು ಇಲ್ಲದೇ ಹೋದರೆ ವಾಹನಗಳನ್ನ ಪೊಲೀಸರೇ ಇಟ್ಟುಕೊಳ್ಳುತ್ತಿದ್ದಾರೆ. ಸದ್ಯ ಲಾಕ್ಡೌನ್ ನಿಯಮ ಹೇರಿದ ದಿನದಿಂದ 48 ಸಾವಿರಕ್ಕೂ ಹೆಚ್ಚು ವಾಹನ ವಶಪಡಿಸಿಕೊಳ್ಳಲಾಗಿತ್ತು.