ಬೆಂಗಳೂರು: ಕೊರೊನಾ ಮಹಾಮಾರಿ ಇದ್ದರೂ ಲೆಕ್ಕಿಸದೆ ಪ್ರತಿದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರು ಆತಂಕದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಪೌರಕಾರ್ಮಿಕರ ಸಂಘಟನೆಗಳ ಒತ್ತಾಯದ ಮೇರೆಗೆ ಬಿಬಿಎಂಪಿ ಪೌರಕಾರ್ಮಿಕರ ರ‍್ಯಾಪಿಡ್ ಟೆಸ್ಟ್ಗೆ ಚಾಲನೆ ನೀಡಿತು. ಜುಲೈ 30 ರಿಂದ ಆಗಸ್ಟ್ 6 ರವರೆಗೆ ಪೌರಕಾರ್ಮಿಕರಿಗೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಲಾಯಿತು. ಎಂಟು ವಲಯಗಳಲ್ಲಿ 11,014 ಮಂದಿಗೆ ನಡೆಸಿದ ಕೊರೊನಾ ಟೆಸ್ಟ್ನಲ್ಲಿ 466 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
10,891 ಮಂದಿ ಪೌರಕಾರ್ಮಿಕರು, ಒಬ್ಬ ಪಿಕೆ ಮೇಲ್ವಿಚಾರಕರು, 120 ಮಂದಿ ಚಾಲಕರು ಹಾಗೂ ಹೆಲ್ಪರ್ ಒಬ್ಬರಿಗೆ ಟೆಸ್ಟ್ ನಡೆಸಲಾಗಿದೆ. ಇದರಲ್ಲಿ 466 ಮಂದಿಗೆ ಕೊರೊನಾ ದೃಢಪಟ್ಟಿದೆ.
ಪಶ್ಚಿಮ ವಿಭಾಗದಲ್ಲಿ ಅತಿಹೆಚ್ಚು ಪೌರಕಾರ್ಮಿಕರಿಗೆ ಟೆಸ್ಟ್ ನಡೆಸಲಾಗಿದ್ದು, 3,385 ಟೆಸ್ಟ್ ರಿಪೋರ್ಟ್ ನಲ್ಲಿ 230 ಮಂದಿಗೆ ಪಾಸಿಟಿವ್ ಬಂದಿದೆ. ಪೂರ್ವದಲ್ಲಿ 49, ದಕ್ಷಿಣದಲ್ಲಿ 48, ಯಲಹಂಕದಲ್ಲಿ 23, ಮಹಾದೇವಪುರದಲ್ಲಿ 12, ಬೊಮ್ಮನಹಳ್ಳಿ 34 , ಆರ್ ಆರ್ ನಗರದಲ್ಲಿ 56, ದಾಸರಹಳ್ಳಿಯಲ್ಲಿ 14 ಮಂದಿಗೆ ಪಾಸಿಟಿವ್ ಬಂದಿದೆ.