ಬೆಂಗಳೂರು: ಆರ್ಮಿ ಅಧಿಕಾರಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ್ದ ನೇಪಾಳ ಮೂಲದ ನಾಲ್ವರು ಖದೀಮರನ್ನು ದೇವರಜೀವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಮನೋಜ್ ಬಹದ್ದೂರ್, ಪ್ರಕಾಶ ಬಹದ್ದೂರ್, ಕೇಶವ ರಾಜ್ ಹಾಗೂ ವಿಕ್ರಮ್ ಬಂಧಿತ ಆರೋಪಿಗಳು. ಬಂಧಿತರಿಂದ 75 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಒಡವೆಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತರೆಲ್ಲರೂ ನಗರದ ವಿವಿಧ ಕಡೆಗಳಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸ ಮಾಡುತ್ತಿದ್ದರು. ಇವರಲ್ಲಿ ಮನೋಜ್ ಎಂಬಾತ ಡಿ.ಜಿ. ಹಳ್ಳಿಯ ಶಾಂಪುರ ಬಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಹಲವು ತಿಂಗಳಿಂದ ಕೆಲಸ ಮಾಡುತ್ತಿದ್ದ ಈತ ಸುತ್ತಮುತ್ತಲಿನ ಏರಿಯಾಗಳಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ.
![4 people arrested in city who robbed army officer house at Bangalore](https://etvbharatimages.akamaized.net/etvbharat/prod-images/kn-bng-03-dghalli-crime-7202806_13052021171945_1305f_1620906585_127.jpg)
ಅದೇ ರೀತಿ ಡಿ.ಜಿ. ಹಳ್ಳಿಯ ಎಂಎಂ ಲೇಔಟ್ ಬಳಿಯ ಅರ್ಮಿ ಅಧಿಕಾರಿಯೊಬ್ಬರ ಮನೆಗೆ ಬೀಗ ಹಾಕಿದನ್ನು ಗುರುತಿಸಿದ್ದ. ಅಲ್ಲದೆ ಆರ್ಮಿ ಅಧಿಕಾರಿ ತಮ್ಮ ತಾಯಿಯನ್ನು ಕೊರೊನಾ ಹಿನ್ನೆಲೆ ಮಗಳ ಮನೆಗೆ ಕಳುಹಿಸಿದ್ದರು. ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಅದೇ ರೀತಿ ಕಳೆದ ತಿಂಗಳು 7ರಂದು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಪಾರ್ಟ್ಮೆಂಟ್ಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಖದೀಮರ ಕೃತ್ಯ ಬಯಲಾಗಿತ್ತು. ಖದೀಮರ ಚಹರೆ ಗುರುತಿಗಾಗಿ ಪರಿಶೀಲಿಸಿದಾಗ ಮನೋಜ ಎಂಬಾತ ಶಾಂಪುರದ ಅಪಾರ್ಟ್ಮೆಂಟ್ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂಬುದು ಪತ್ತೆಯಾಗಿದೆ. ಲಭ್ಯವಾಗಿದ್ದ ಸಿಸಿಟಿವಿ ಹಾಗೂ ಟವರ್ ಡಂಪ್ ಮೂಲಕ ಆರೋಪಿಗಳನ್ನು ಇನ್ಸ್ಪೆಕ್ಟರ್ ಕಿರಣ್ ನೇತೃತ್ವದ ತಂಡ ಬಂಧಿಸಿದೆ.
ಕರ್ಫ್ಯೂ ಜಾರಿಯಿಂದಾಗಿ ಕದ್ದ ಚಿನ್ನಾಭರಣ ಎಲ್ಲಿ ವಿಲೇವಾರಿ ಮಾಡಬೇಕೆಂದು ಗೊಂದಲದಲ್ಲಿದ್ದರು. ಕೆಲ ದಿನಗಳ ಬಳಿಕ ವಿಕ್ರಮ್ ಎಂಬಾತ ಮುಂಬೈ ಮಾರ್ಗವಾಗಿ ನೇಪಾಳಕ್ಕೆ ಎಸ್ಕೇಪ್ ಆಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.