ಬೆಂಗಳೂರು: ನಗರದಲ್ಲಿ ಇಂದು 36 ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿದ್ದು, ಮಹಾಮಾರಿಗೆ ನಾಲ್ವರು ಬಲಿಯಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 617ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 299 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, 290 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಗರದಲ್ಲಿ ಕೋವಿಡ್-19 ಮರಣ ಪ್ರಕರಣ 27ಕ್ಕೆ ಏರಿಕೆಯಾಗಿದೆ. 36 ಕೋವಿಡ್ ಪಾಸಿಟಿವ್ ಪ್ರಕರಣಗಳ ಪೈಕಿ, ಒಬ್ಬರು ಮಾತ್ರ ಮಹಾರಾಷ್ಟ್ರ ಪ್ರಯಾಣಿಕರಾಗಿದ್ದು, ಉಳಿದ 35 ಪ್ರಕರಣಗಳು ನಗರದ ಹೊಸ ಹೊಸ ಪ್ರದೇಶಗಳಿಂದ ಸೋಂಕಿನ ಲಕ್ಷಣ ಹಾಗೂ, ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಕಂಡು ಬಂದಿದೆ.
36 ಪ್ರಕರಣಗಳ ಪೈಕಿ 7 ಪ್ರಕರಣಗಳು ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿವೆ. ದೆಹಲಿ ಪ್ರಯಾಣಿಕ P-4004 ರೋಗಿಯ ಪ್ರಥಮ ಸಂಪರ್ಕದಲ್ಲಿದ್ದ ಇಬ್ಬರಿಗೆ, ಕುಮಾರಸ್ವಾಮಿ ಲೇಔಟ್ನ P-4845 ಸಂಪರ್ಕದ ಮಹಿಳೆಗೆ, ಕೊಮ್ಮಘಟ್ಟದ ಬಿಡಿಎ ಫ್ಲಾಟ್ನಲ್ಲಿದ್ದ 59 ವರ್ಷದ ಮಹಿಳೆಗೆ, ಅನೇಕಲ್ ಹಾಗೂ ಜೆಪಿ ನಗರದ ಯುವತಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಗರದಲ್ಲಿ ಇಂದು ನಾಲ್ವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. 61 ವರ್ಷದ ಮಹಿಳೆ, ತೀವ್ರ ಉಸಿರಾಟದ ಸಮಸ್ಯೆಯಿಂದ 65 ವರ್ಷದ ಮಹಿಳೆ, 52 ವರ್ಷದ ವ್ಯಕ್ತಿ ಹಾಗೂ 49 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಪಾಲಿಕೆಯ ವಾರ್ ರೂಂ ರಿಪೋರ್ಟ್ ಪ್ರಕಾರ ಇಂದಿಗೆ ಸೋಂಕಿತರ ಸಂಖ್ಯೆ 625ಕ್ಕೆ ಏರಿಕೆಯಾಗಿದೆ. ನಿನ್ನೆ 113 ಇದ್ದ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ 116ಕ್ಕೆ ಏರಿಕೆಯಾಗಿದ್ದು, ಬಿಟಿಎಮ್ ಲೇಔಟ್, ಹೊರಮಾವು, ಹೊಂಗಸಂದ್ರದಲ್ಲಿ ಒಂದೊಂದು ಹೊಸ ಪ್ರಕರಣಗಳು ಕಂಡುಬಂದಿದೆ.
ಅತಿ ಹೆಚ್ಚು ಕೊರೊನಾ ಪಾಸಿಟಿವ್ ಇರುವ ಕ್ಲಸ್ಟರ್ ವಿವರ
ನಗರದ ಕೋವಿಡ್-19 ಪಾಸಿಟಿವ್ ಪ್ರಕರಣಗಳಲ್ಲಿ ಪಾದರಾಯನಪುರದಲ್ಲಿ 6, ಅಗರಮ್ನಲ್ಲಿ 2, ಮಲ್ಲೇಶ್ವರಂನಲ್ಲಿ 3, ಅಗ್ರಹಾರ ದಾಸರಹಳ್ಳಿಯಲ್ಲಿ 7, ಎಸ್ಕೆ ಗಾರ್ಡನ್ ನಲ್ಲಿ 13, ಮಂಗಮ್ಮನಪಾಳ್ಯದಲ್ಲಿ 3, ಹಾಗೂ ಇತರೆ ವಾರ್ಡ್ ಗಳಲ್ಲಿ 66 ರಷ್ಟು ಕೊರೊನಾ ಸೋಂಕಿನ ಪ್ರಕರಣಗಳಿವೆ.