ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಕ್ಷದ ಶಾಸಕರಿಗೆ ಆಯೋಜಿಸಿದ್ದ ಭೋಜನ ಕೂಟಕ್ಕೆ 25 ಶಾಸಕರು ಗೈರಾಗಿದ್ದು, ಉಳಿದಂತೆ ಎಲ್ಲ ಶಾಸಕರು ಹಾಜರಾಗಿ ಸಿಎಂ ಆತಿಥ್ಯ ಸ್ವೀಕಾರ ಮಾಡಿದ್ದಾರೆ.
![25 mlas obsent in cm dinner party](https://etvbharatimages.akamaized.net/etvbharat/prod-images/kn-bng-14-cm-mla-dinner-meet-overall-script-7208080_02022021233221_0202f_1612288941_905.jpg)
ಔತಣ ಕೂಟಕ್ಕೆ ಗೈರಾದ ಶಾಸಕರು:- ಬಸನಗೌಡ ಪಾಟೀಲ್ ಯತ್ನಾಳ್- ಅರವಿಂದ ಬೆಲ್ಲದ- ಪೂರ್ಣಿಮಾ ಶ್ರೀನಿವಾಸ್- ಮಹಾಂತೇಶ ದೊಡ್ಡನಗೌಡ ಪಾಟೀಲ- ವೀರಣ್ಣ ಚರಂತಿಮಠ- ಮಹಾಂತೇಶ ದೊಡ್ಡನಗೌಡರ್- ಕಳಕಪ್ಪ ಬಂಡಿ- ದಿನಕರ್ ಶೆಟ್ಟಿ- ಸುನೀಲ್ ನಾಯ್ಕ್- ಸಿ ಎಂ ಉದಾಸಿ- ಅರುಣ್ ಕುಮಾರ್- ಆನಂದ್ ಸಿಂಗ್- ಸೋಮಶೇಖರ ರೆಡ್ಡಿ- ಜಿ ಎಚ್ ತಿಪ್ಪಾರೆಡ್ಡಿ- ಕರುಣಾಕರ ರೆಡ್ಡಿ- ಗೂಳಿಹಟ್ಟಿ ಶೇಖರ್- ಸತೀಶ್ ರೆಡ್ಡಿ- ಉದಯ್ ಗರುಡಾಚಾರ್- ಸುರೇಶ್ ಕುಮಾರ್- ಎಂ ಪಿ ಕುಮಾರಸ್ವಾಮಿ- ಸಿ ಟಿ ರವಿ- ಜೆ ಸಿ ಮಾಧುಸ್ವಾಮಿ- ಎಚ್ ನಾಗೇಶ್- ಡಿ ಎಸ್ ಸುರೇಶ್ - ಎಸ್ ಎ ರಾಮದಾಸ್
ಈಶ್ವರಪ್ಪ ಹಾಜರ್: ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಸಿರುವ ಸಭೆಗಳಿಗೆ ಹಾಜರಾಗದೇ ಇರುತ್ತಿದ್ದ ಸಚಿವ ಕೆ.ಎಸ್. ಈಶ್ವರಪ್ಪ ಇಂದಿನ ಔತಣ ಕೂಟಕ್ಕೆ ಗೈರಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಔತಣ ಕೂಟದಲ್ಲಿ ಭಾಗಿಯಾದರು. ಇಷ್ಟದ ವಿರುದ್ಧವಿದ್ದಲ್ಲಿ ನಾನು ಎಲ್ಲಿಗೂ ಬರಲ್ಲ, ಊಟಕ್ಕೆ ಬರೋದರಲ್ಲಿ ತಪ್ಪೇನಿದೆ ಹಾಗಾಗಿ ಔತಣ ಕೂಟಕ್ಕೆ ಬಂದಿದ್ದಾಗಿ ಈಶ್ವರಪ್ಪ ತಿಳಿಸಿದರು.
ಕೇರಳ ಪ್ರವಾಸದ ಕಾರಣ: ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಸಮಾಧಾನಿತರ ಗುಂಪಿನಲ್ಲಿದ್ದು, ಪ್ರತ್ಯೇಕ ಸಭೆಯಂತಹ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನಿರೀಕ್ಷೆಯಂತೆ ಇಂದಿನ ಸಭೆಗೆ ಗೈರಾಗಿದ್ದಾರೆ. ಕೇರಳ ಉಸ್ತುವಾರಿಯಾಗಿರುವ ಸುನೀಲ್ ಕುಮಾರ್, ಜೆ ಪಿ ನಡ್ಡಾ ಕೇರಳ ಭೇಟಿ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಲು ಪೂರ್ವಾನುಮತಿ ಪಡೆದೇ ಸಿಎಂ ಔತಣಕೂಟಕ್ಕೆ ಗೈರಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ರೇಣುಕಾಚಾರ್ಯ ಟೀಂ ಹಾಜರ್: ಇನ್ನು ಪದೇ ಪದೆ ಅಸಮಾಧಾನ ಹೊರ ಹಾಕುತ್ತಲೇ ಇರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಟೀಂ ಸಿಎಂ ಔತಣಕೂಟದಲ್ಲಿ ಭಾಗಿಯಾಯಿತು. ಸಿಎಂ ಜೊತೆ ಭೋಜನ ಸವಿಯುತ್ತಾ ಕೆಲಕಾಲ ಮಾತುಕತೆ ನಡೆಸಿತು.
ಮಾಧುಸ್ವಾಮಿ ಗೈರು: ಸಚಿವ ಸ್ಥಾನದ ಬದಲಾವಣೆ ನಂತರ ಅಸಮಾಧಾನಗೊಂಡಿರುವ ಸಚಿವ ಜೆ ಸಿ ಮಾಧುಸ್ವಾಮಿ ಕೂಡ ಡಿನ್ನರ್ ಪಾರ್ಟಿಯಿಂದ ದೂರ ಉಳಿದರು. ಖಾತೆಗಳ ಪದೇ ಪದೆ ಬದಲಾವಣೆಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಮಾಧುಸ್ವಾಮಿ ನಂತರ ಸಣ್ಣ ನೀರಾವರಿ ಖಾತೆ ಸಿಕ್ಕ ನಂತರ ಮುನಿಸಿಕೊಂಡಿದ್ದರು. ಆದರೂ ಸಿಎಂ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
ಯತ್ನಾಳ್ ರೆಬಲ್: ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನಿಸಿ ಪಕ್ಷದಿಂದ ಬಹುದೂರ ಸಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಔತಣ ಕೂಟಕ್ಕೆ ಗೈರಾದರು. ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲವಾದ ಕಾರಣ ಅವರು ಆಗಮಿಸಲಿಲ್ಲ, ಸಿಎಂ ಯಡಿಯೂರಪ್ಪ ವಿರುದ್ಧ ಟೀಕೆ ಮುಂದುವರೆಸಿರುವ ಯತ್ನಾಳ್ ಇಂದು ಕೂಡ ಸಭೆಯಿಂದ ದೂರ ಉಳಿದ ವಾಗ್ದಾಳಿ ಮುಂದುವರೆಸಿದ್ದಾರೆ.