ಬೆಂಗಳೂರು: 2023 ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಸಿನಿಮಾ ತಾರೆಯರು ಕೂಡ ಈ ಬಾರಿ ಪ್ರಚಾರ ಕಣಕ್ಕೆ ಇಳಿದು ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೈಗೊಂಡರು. ಇನ್ನೇನು ವಿಧಾನಸಭೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಅದೇ ರೀತಿ ಕನ್ನಡ ಚಿತ್ರರಂಗದಿಂದ ಸಾಕಷ್ಟು ನಟರು ರಾಜಕಾರಣಕ್ಕೆ ಬಂದು ಜನರ ಪ್ರೀತಿ ವಿಶ್ವಾಸ ಗಳಿಸಿ ಅದರಲ್ಲಿ ಕೆಲ ತಾರೆಯರು ಸಕ್ಸಸ್ ಕಂಡಿದ್ದಾರೆ. ಹಾಗಾದರೆ ಈ ಬಾರಿ ಚುನಾವಣೆಯಲ್ಲಿ ಯಾರೆಲ್ಲ ಕನ್ನಡ ಚಿತ್ರರಂಗದವರು ಜನರ ಪ್ರೀತಿ ಗಳಿಸಿ ಗೆಲ್ಲಲು ಪಣ ತೊಟ್ಟಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಂತರ ಸಿನಿಮಾಗೆ ಪಾದಾರ್ಪಣೆ ಮಾಡಿದ ನಟ ಹಾಗು ನಿರ್ಮಾಪಕ ಬಿ ಸಿ ಪಾಟೀಲ್. ನಿಷ್ಕರ್ಷ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಬಿ ಸಿ ಪಾಟೀಲ್, ಇದೇ ಸ್ಟಾರ್ ಡಮ್ ಬಳಸಿ ರಾಜಕೀಯಕ್ಕೆ ಬರ್ತಾರೆಂದು ಯಾರೂ ಊಹಿಸಿರಕ್ಕಿರಲಿಲ್ಲ.
ಜೆಡಿಎಸ್ ಪಕ್ಷದಿಂದ ರಾಜಕೀಯ ಜರ್ನಿ ಶುರು ಮಾಡಿದ ಬಿ ಸಿ ಪಾಟೀಲ್ ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಮಂತ್ರಿಮಂಡಲದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದರು. ಈಗ ಮತ್ತೆ ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವ ಮೂಲಕ ಮತ್ತೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಇನ್ನು ಸ್ಯಾಂಡಲ್ವುಡ್ಗೆ ಸಹ ಕಲಾವಿದನಾಗಿ ಬಂದು, ನಂತರ ನಾಯಕ ನಟನಾದವರಲ್ಲಿ ಸಿ ಪಿ ಯೋಗಿಶ್ವರ್ ಕೂಡ ಒಬ್ಬರು. ಸೈನಿಕ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟನಾದ ಸಿ ಪಿ ಯೋಗಿಶ್ವರ್ ಕೂಡ 1999ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯ ಜರ್ನಿ ಶುರು ಮಾಡಿದರು. ಸದ್ಯ ಬಿಜೆಪಿ ಪಕ್ಷದಲ್ಲಿ ಸಿ ಪಿ ಯೋಗೀಶ್ವರ್ ಗುರುತಿಸಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಿ ಎಂ ಕುಮಾರಸ್ವಾಮಿ ವಿರುದ್ಧ ಸಿ ಪಿ ಯೋಗೀಶ್ವರ್ ಮತ್ತೆ ಗೆಲ್ಲಲು ಪಣ ತೊಟ್ಟಿದ್ದಾರೆ.
ಶರವೇಗದ ಸರದಾರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಕುಮಾರ್ ಬಂಗಾರಪ್ಪ. 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟನಾಗಿದ್ದರು. 1996ರಲ್ಲಿ ರಾಜಕೀಯ ಪ್ರವೇಶ ಮಾಡಿದ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಹಿರಿಯ ಪುತ್ರ. ಇದೀಗ ಶಿವಮೊಗ್ಗದ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡುವ ಮೂಲಕ ಜನರ ಪ್ರೀತಿ ಗಳಿಸಿ, ಬಿಜೆಪಿಯಿಂದ ಸೊರಬದಲ್ಲಿ ಈ ಬಾರಿಯ ಎಲೆಕ್ಷನ್ ನಲ್ಲಿ ಕುಮಾರ ಬಂಗಾರಪ್ಪಗೆ ಪ್ರತಿಷ್ಠೆ ಆಗಿದೆ.
2001ರಲ್ಲಿ ಆಂಟಿ ಪ್ರೀತ್ಸೆ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕನಾಗಿ ಮುನಿರತ್ನ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದರು. ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದರು.ಸದ್ಯ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿ ಕೆಲಸ ಮಾಡಿ, ಈಗ ಮತ್ತೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ತಂದೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜಕೀಯದ ಜತೆಗೆ ಸಿನಿಮಾಗಳನ್ನು ನಿರ್ಮಿಸಿ ನಿರ್ಮಾಪಕರಾಗಿಯೂ ಅನೇಕ ಚಿತ್ರಗಳನ್ನು ವಿತರಿಸುವ ಮೂಲಕ ವಿತರಕನಾಗಿಯೂ ಗುರುತಿಸಿಕೊಂಡಿದ್ದಾರೆ. ಇದರಿಂದ ನಿಖಿಲ್‌ಗೆ ಸಿನಿಮಾದತ್ತ ಆಸಕ್ತಿ ಮೂಡಿತು. ಚಿತ್ರರಂಗಕ್ಕೆ ಬರಬೇಕೆಂದು ನಿರ್ಧರಿಸಿದ ನಿಖಿಲ್, ತಂದೆ ಬಳಿ ಮನದಾಸೆ ಹೇಳಿಕೊಂಡರು. ಕೊನೆಗೂ ಜಾಗ್ವಾರ್ ಚಿತ್ರದ ಮೂಲಕ ನಿಖಿಲ್ ಹೀರೋ ಆದರು.
ತೆಲುಗು, ಕನ್ನಡದಲ್ಲಿ ತಯಾರಾದ ಜಾಗ್ವಾರ್ ಚಿತ್ರವನ್ನು ಚನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್ ಅಡಿ ಅನಿತಾ ಕುಮಾರಸ್ವಾಮಿ ನಿರ್ಮಿಸಿದರು. 2016 ರಲ್ಲಿ ಈ ಸಿನಿಮಾ ಬಿಡುಗಡೆ ಆಯ್ತು. ಮೊದಲ ಚಿತ್ರದಲ್ಲೇ ನಿಖಿಲ್ ಸಿನಿಪ್ರಿಯರ ಗಮನ ಸೆಳೆದರು. ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬರಬೇಕೆಂಬುದು ಜೆಡಿಎಸ್ ಬೆಂಬಲಿಗರ ಆಸೆಯಾಗಿತ್ತು.
ತಾತ, ತಂದೆ ಹಾಗೂ ಕಾರ್ಯಕರ್ತರ ಪ್ರೀತಿಗೆ ಮಣಿದ ನಿಖಿಲ್ 2019ರ ಲೋಕಸಭೆ ಚುನಾವಣೆ ಮೂಲಕ ರಾಜಕೀಯಕ್ಕೂ ಎಂಟ್ರಿ ಕೊಟ್ಟರು. ಆ ವರ್ಷ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದಿಂದ ಮಂಡ್ಯ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ ನಟಿ ಸುಮಲತಾ ಎದುರು ಸ್ಪರ್ಧೆಗೆ ನಿಂತು ಸೋಲು ಅನುಭವಿಸಿದರು. ಸದ್ಯಕ್ಕೆ ನಿಖಿಲ್ ರಾಮನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರನಾಗಿರೋ ಮಧು ಬಂಗಾರಪ್ಪ 1992ಲ್ಲಿ ಪುರುಷೋತ್ತಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ನಟನೆ ಜೊತೆಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಮಧು ಬಂಗಾರಪ್ಪ ನಂತರ ಸಂಪೂರ್ಣ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ. 2013ರಲ್ಲಿ ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.ಕಳೆದ ಬಾರಿ ಜೆಡಿಎಸ್‌ನಲ್ಲಿ ನಿಂತು ಸೋತು ಸುಣ್ಣವಾಗಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಮೂಲಕ ಕುಮಾರು ಬಂಗಾರಪ್ಪ ವಿರುದ್ಧ ಶತಾಯ ಗತಾಯ ಗೆಲ್ಲಲು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಈ ಬಾರಿ ಅಣ್ಣನ ವಿರುದ್ದ ಮಧು ಬಂಗಾರಪ್ಪ ಗೆಲ್ಲುತ್ತಾರೆ ಅನ್ನೋದು ಫಲಿತಾಂಶ ಬಂದ ಮೇಲೆ ಗೊತ್ತಾಗಲಿದೆ.
ಈ ತಾರೆಯರ ಜತೆಗೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕಾಂಗ್ರೆಸ್ನಿಂದ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ನಿವಾಸಿಯಾಗಿರೋ ಉಮಾಪತಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಅಖಾಡದಲ್ಲಿ ಇದ್ದಾರೆ. ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ವಿರುದ್ಧ ಉಮಾಪತಿ ಶ್ರೀನಿವಾಸ್ ಗೆಲ್ಲಲು ಪಣ ತೊಟ್ಟಿದ್ದಾರೆ.
ಒಟ್ಟಾರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಸಿನಿಮಾ ರಂಗದಿಂದ ಈ ತಾರೆಯರು ರಾಜಕೀಯ ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ಮ್ಯಾಜಿಕ್ ಮಾಡ್ತಾರೆ ಅನ್ನೋದು ಮೇ 13 ಚುನಾವಣೆ ಫಲಿತಾಂಶ ಬಂದ ಮೇಲೆ ಗೊತ್ತಾಗಲಿದೆ.
ಇದನ್ನೂಓದಿ:ನಾಳೆ ಮತ ಹಾಕಿದವರಿಗೆ ಈ ಕೆಫೆನಲ್ಲಿ ಯಾವುದೇ ತಿನಿಸಿಗೆ 50 ಪರ್ಸೆಂಟ್ ರಿಯಾಯಿತಿ..