ಬೆಂಗಳೂರು: ಕೇವಲ ಆರು ತಿಂಗಳ ಅವಧಿಯಲ್ಲಿ ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಬದಲಾವಣೆಗಳು ಸಾಲು ಸಾಲಾಗಿ ಜರುಗಿದ್ದಕ್ಕೆ 2019ನೇ ವರ್ಷ ಸಾಕ್ಷಿಯಾಗಿದೆ. 17 ಶಾಸಕರ ರಾಜೀನಾಮೆ, ಅನರ್ಹತೆ, ಮರುಚುನಾವಣೆ ಹೀಗೆ ಒಂದರ ಹಿಂದೆ ಒಂದು ಮಹತ್ವದ ರಾಜಕೀಯ ಚಟುವಟಿಕೆಗಳೊಂದಿಗೆ 2019ನೇ ವರ್ಷ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಅತ್ಯಂತ ಮಹತ್ವದ ವರ್ಷ ಎಂದರೆ ತಪ್ಪಾಗಲಾರದು.
ಜು.1ರಂದು ಬಳ್ಳಾರಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ರಾಜೀನಾಮೆಯಿಂದ ಆರಂಭವಾದ ರಾಜಿನಾಮೆ ಪರ್ವ ಜು.17ರಂದು ರಾತ್ರಿ ಕಾಂಗ್ರೆಸ್ ಶಾಸಕರು ತಂಗಿದ್ದ ರೆಸಾಟ್ನಿಂದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಕಣ್ಮರೆಯಾಗುವ ಮೂಲಕ ಮುಕ್ತಾಯಗೊಂಡಿತ್ತು. ಒಟ್ಟು 17 ಶಾಸಕರು ಅಂತಿಮವಾಗಿ ರಾಜೀನಾಮೆ ನೀಡಿದರು. ಇವರನ್ನು ಹೊರತುಪಡಿಸಿ ಮಾಜಿ ಸಚಿವ ರಾಮಲಿಂಗರೆಡ್ಡಿ ಕೂಡ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಪಕ್ಷ ಮನವೊಲಿಸಿದ ಹಿನ್ನೆಲೆ ವಾಪಸ್ ಪಡೆದ್ದಿದ್ದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರ ದೂರಿನ ಮೇರೆಗೆ ಶಾಸಕರ ರಾಜೀನಾಮೆ ಕ್ರಮಬದ್ಧತೆ ಕುರಿತು ವಿಚಾರಣೆ ನಡೆಸಿದ ಸ್ಪೀಕರ್ ರಮೇಶ್ ಕುಮಾರ್, ಮೊದಲ ಹಂತದಲ್ಲಿ ಮೂವರು ಶಾಸಕರನ್ನು ಜು.25ರಂದು ಹಾಗೂ ನಂತರದ ಹಂತದಲ್ಲಿ ಉಳಿದ 14 ಶಾಸಕರನ್ನು ಜು.28ರಂದು ಅನರ್ಹಗೊಳಿಸಿ ಆದೇಶ ಹೊರಡಿಸಿದರು. ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ.13ರಂದು ತೀರ್ಪು ಪ್ರಕಟಿಸಿದ ಕೋರ್ಟ್, ಸ್ಪೀಕರ್ ಆದೇಶವನ್ನು ಎತ್ತಿ ಹಿಡಿಯುವ ಜತೆಗೆ ಅನರ್ಹ ಶಾಸಕರು ಮರುಚುನಾವಣೆಯಲ್ಲಿ ಸ್ಪರ್ಧಿಸಬಹುದು, ಗೆದ್ದ ನಂತರವೇ ಬೇರೆ ಸಾಂವಿಧಾನಿಕ ಹುದ್ದೆ ಅಲಂಕರಿಸಬಹುದು ಎಂದು ಸ್ಪಷ್ಟಪಡಿಸಿತು.
ಉಪಚುನಾವಣೆ ಅದಾಗಲೇ ಘೋಷಣೆಯಾಗಿದ್ದರಿಂದ ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್ ಹೊರತುಪಡಿಸಿ ಉಳಿದ ಎಲ್ಲಾ ಅನರ್ಹ ಶಾಸಕರು ತರಾತುರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಮತದಾರರ ನಕಲಿ ಗುರುತಿನ ಚೀಟಿ ಪತ್ತೆ ಹಿನ್ನೆಲೆ ರಾಜರಾಜೇಶ್ವರಿನಗರ ಹಾಗೂ ತಮ್ಮ ಗೆಲುವಿನ ತನಿಖೆ ಆಗಲಿ ಎಂದು ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಾಖಲಿಸಿದ್ದ ದೂರಿನ ವಿಚಾರಣೆ ಬಾಕಿ ಇರುವ ಹಿನ್ನೆಲೆ ಈ ಎರಡು ಕ್ಷೇತ್ರಕ್ಕೆ ಈವರೆಗೂ ಚುನಾವಣೆ ಆಗಿಲ್ಲ. ಉಳಿದಂತೆ 15 ಕ್ಷೇತ್ರಗಳ ಉಪಚುನಾವಣೆ ನಡೆಯಿತು.
15 ಕ್ಷೇತ್ರಗಳ ಪೈಕಿ ರಾಣೆಬೆನ್ನೂರು ಅನರ್ಹ ಶಾಸಕ ಆರ್. ಶಂಕರ್ ಹಾಗೂ ಯಾವ ಪಕ್ಷವನ್ನೂ ಸೇರದ ಶಿವಾಜಿನಗರ ಅನರ್ಹ ಶಾಸಕ ರೋಷನ್ ಬೇಗ್ ಚುನಾವಣೆಗೆ ಸ್ಪರ್ಧಿಸಲಿಲ್ಲ. ಇವರ ಬದಲು ಆಯಾ ಕ್ಷೇತ್ರದಿಂದ ಬಿಜೆಪಿಯಿಂದ ಅರುಣ್ ಕುಮಾರ್ ಹಾಗೂ ಸರವಣ ಸ್ಪರ್ಧಿಸಿದ್ದರು. ಚುನಾವಣೆ ಫಲಿತಾಂಶ ಬಂದಿದ್ದು 15 ಕ್ಷೇತ್ರಗಳ ಪೈಕಿ 12 ಕಡೆ ಬಿಜೆಪಿ ಗೆದ್ದಿದೆ. ಬಹುತೇಕ ಅನರ್ಹರು ಗೆಲುವಿನ ನಗೆ ಬೀರಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನಿಂದ ಸ್ಪರ್ಧಿಸಿದ್ದ ಜೆಡಿಎಸ್ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹಾಗೂ ಹೊಸಕೋಟೆಯಿಂದ ಸ್ಪರ್ಧಿಸಿದ್ದ ಅನರ್ಹ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಸೋಲುಂಡಿದ್ದಾರೆ. ಬದಲಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಶಿವಾಜಿನಗರದಲ್ಲಿ ಸ್ಪರ್ಧಿಸಿದ್ದ ಸರವಣ ಸೋತಿದ್ದಾರೆ. ಉಪಚುನಾವಣೆಯಲ್ಲಿ 12ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಸದ್ಯ ರಾಜ್ಯ ವಿಧಾನಸಭೆ ಸಂಖ್ಯಾಬಲ ಗಮನಿಸಿದರೆ ಒಟ್ಟು 224 ಸ್ಥಾನಗಳ ಪೈಕಿ ಬಿಜೆಪಿ 117, ಕಾಂಗ್ರೆಸ್ 68, ಜೆಡಿಎಸ್ 34, ಪಕ್ಷೇತರರು 3 ಸದಸ್ಯರಿದ್ದಾರೆ. ಎರಡು ಸ್ಥಾನ ಖಾಲಿ ಇದೆ. ವರ್ಷದ ಆರಂಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ.