ಬೆಂಗಳೂರು: ಕೊರೊನಾ ಆತಂಕದ ನಡುವೆ ವಿಕ್ಟೋರಿಯಾ ಆಸ್ಪತ್ರೆಯ ಕ್ಯಾಂಪಸ್ನಲ್ಲಿ ಮೂರು ದಿನದ ಸಾಂಸ್ಕೃತಿಕ ಸಮಾರಂಭ ಆಯೋಜನೆ ಮಾಡಲಾಗಿದೆ. ಇದು ಹಲವು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರಿ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ನಲ್ಲಿರುವ ಹಲವು ವಿದ್ಯಾರ್ಥಿಗಳಲ್ಲಿ ಈ ಹಿಂದೆ ಸೋಂಕು ಪತ್ತೆಯಾಗಿತ್ತು. ಅದು ಮರೆಯಾಗುವ ಮುನ್ನವೇ ನಿನ್ನೆಯಷ್ಟೇ ಮತ್ತೆ ಏಳು ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಇದರ ನಡುವೆ ಸಾಂಸ್ಕೃತಿಕ ಸಮಾರಂಭ ಆಯೋಜಿಸಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಭೀತಿ ಹುಟ್ಟಿಸಿದೆ.
ಕೋವಿಡ್ಗೆ ಚಿಕಿತ್ಸೆ ನೀಡುವ ವಿಕ್ಟೋರಿಯಾ ಆಸ್ಪತ್ರೆ ಸಾಲು ಸಾಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ನಿರ್ಲಕ್ಷ್ಯ ತೋರಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಏನಾದರು ಅನಾಹುತ ಸಂಭವಿಸಿದೆರೆ ಅಥವಾ ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾದರೆ ಯಾರು ಹೊಣೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಇದೇ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಿಂದ 12 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲು ಮಾಡಲಾಗಿತ್ತು. ಈಗ ಮತ್ತೆ 7 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ, ಇಲ್ಲಿನ ಆಡಳಿತ ಮಂಡಳಿ ಯಾವುದೇ ಮುಂಜಾಗ್ರತೆ (ಸೀಲ್ಡೌನ್) ತೆಗೆದುಕೊಳ್ಳದೇ ಮತ್ತೆ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಿದೆ. ಹಾಸ್ಟೆಲ್ನಲ್ಲಿ 250ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು ಪಾಸಿಟಿವ್ ಆದ ವಿದ್ಯಾರ್ಥಿಗಳ ಸಂಪರ್ಕಿತರನ್ನು ಐಸೋಲೇಷನ್ ಮಾಡಿಲ್ಲ ಎಂದು ಹೇಳಲಾಗ್ತಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಮತ್ತೆ ಸೋಂಕು ತಗುಲುವ ಭೀತಿ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮೈಸೂರು ಅತ್ಯಾಚಾರ ಪ್ರಕರಣ ಚರ್ಚೆ ವೇಳೆ ನಡೆಯಿತು ಸಿದ್ದರಾಮಯ್ಯರ ಪಂಚೆ ಪ್ರಸಂಗ!