ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತ ಅಕ್ಷಯಾ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಹಣವನ್ನು ನೀಡಲಾಯಿತು. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಶಾಸಕ ಭೈರತಿ ಸುರೇಶ್, ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ಸೇರಿದಂತೆ ಪ್ರಮುಖರು 10 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿದರು.
ಮಾರ್ಚ್ 21ರಂದು ಹೆಬ್ಬಾಳದ ಬಳಿ ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಅಕ್ಷಯಾ ಮೃತಪಟ್ಟಿದ್ದಳು. ಹೀಗಾಗಿ, ಇಂದು ಅಕ್ಷಯಾ ಕುಟುಂಬಸ್ಥರಿಗೆ ಬಿಬಿಎಂಪಿ ಐದು ಲಕ್ಷ, ಶಾಸಕ ಬೈರತಿ ಸುರೇಶ್ ಮೂರು ಲಕ್ಷ ಹಾಗೂ ಲಾರಿ ಮಾಲೀಕ 2 ಲಕ್ಷ ಸೇರಿದಂತೆ ಒಟ್ಟು 10 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದರು. ಈ ಕುರಿತು ಶಾಸಕ ಬೈರತಿ ಸುರೇಶ್ ಪ್ರತಿಕ್ರಿಯಿಸಿ, ವಿದ್ಯಾರ್ಥಿನಿ ಅಕ್ಷಯಾ ಅಪಘಾತಕ್ಕೆ ಸಂಬಂಧಿಸಿದಂತೆ ನಿನ್ನೆ ಆಯುಕ್ತರು ಮನೆಗೆ ಭೇಟಿ ನೀಡಿ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದರು.
ವಿದ್ಯಾಭ್ಯಾಸಕ್ಕೆ ಸಹಕಾರ : ಆದರೆ, ಅಕ್ಷಯಾ ಅವರದ್ದು ಬಡ ಕುಟುಂಬವಾಗಿದ್ದು, ಮತ್ತಷ್ಟು ಸಹಾಯದ ಅವಶ್ಯಕತೆ ಅವರಿಗೆ ಇದೆ. ಇಂದು ಮತ್ತೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ಜೈನ್ ಹಾಗೂ ಜಂಟಿ ಆಯುಕ್ತೆ ಶಿಲ್ಪ ಅವರು ಕುಟುಂಬದೊಂದಿಗೆ ಚರ್ಚಿಸಿ 10 ಲಕ್ಷ ಪರಿಹಾರ ನೀಡಿದ್ದಾರೆ. ಜೊತೆಗೆ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲಾಗುವುದು. ಬಿಬಿಎಂಪಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನೀಡಲಾಗುವುದು ಎಂದು ಅಭಯ ನೀಡಿದರು. ಈ ಸಂದರ್ಭದಲ್ಲಿ ಮೃತ ಬಾಲಕಿಯ ಪೋಷಕರಾದ ನರಸಿಂಹ ಮೂರ್ತಿ ಹಾಗೂ ಗೀತಾ ಉಪಸ್ಥಿತರಿದ್ದರು.
ಓದಿ: ಸತ್ತ ಅಣ್ಣನ ಹೆಸರಿನಲ್ಲಿ 24 ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ ತಮ್ಮ ಅರೆಸ್ಟ್