ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಪ್ರತಿ ಗ್ರಾಮದಲ್ಲಿ ಯಾರೇ ಸಾವನ್ನಪ್ಪಿದರೂ ಅಂತ್ಯಕ್ರಿಯೆ ಮಾಡಲು ಊರಿನ ಹೊರಗಡೆ ಸ್ಮಶಾನ ಜಾಗವನ್ನು ಮೀಸಲಿಡಲಾಗಿರುತ್ತದೆ. ಆದರೆ, ದೇವನಹಳ್ಳಿ ತಾಲೂಕಿನ ಬಿಡಿಗಾನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲು ಹೆಣ ತೆಗೆದುಕೊಂಡು ತೆರಳಲು ಸ್ಮಶಾನಕ್ಕೆ ರಸ್ತೆಯಿಲ್ಲದೇ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸ್ಮಶಾನಕ್ಕೆ ತೆರಳಲು ದಾರಿಯನ್ನು ಟ್ರೆಂಚ್ ಹೊಡೆದು ಖಾಸಗಿ ಜಮೀನಿನ ಮಾಲೀಕರು ಅಡ್ಡಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಿಡಿಗಾನಹಳ್ಳಿ ಗ್ರಾಮದ ಸರ್ವೆ.ನ 27 ರಲ್ಲಿ ಸರ್ಕಾರ 1 ಎಕರೆ 13 ಗುಂಟೆ ಸ್ಮಶಾನಕ್ಕಾಗಿ ಜಾಗವನ್ನ ಮಂಜೂರು ಮಾಡಿದೆ. ಆದರೆ ಇದೇ ಸ್ಮಶಾನಕ್ಕೆ ಹೋಗಲು ರಸ್ತೆಯಿಲ್ಲದೇ ಗ್ರಾಮಸ್ಥರು ಪರದಾಡಬೇಕಿದೆ. ಈ ಹಿಂದಿನಿಂದಲೂ ಖಾಸಗಿ ಜಮೀನಿನಲ್ಲೆ ಹಿರಿಯರು ದಾರಿಯನ್ನು ಬಿಟ್ಟಿದ್ದು, ಅಂತ್ಯಕ್ರಿಯೆ ಮಾಡಲು ಈ ದಾರಿ ಮೂಲಕ ಸಾಗುತ್ತಿದ್ದರು. ಆದರೆ, ಇದೀಗ ಖಾಸಗಿ ಜಮೀನಿನ ಮಾಲೀಕರು ಸ್ಮಶಾನದ ಜಾಗಕ್ಕೆ ತೆರಳುವ ಕಾಲು ದಾರಿಯನ್ನು ಟ್ರಂಚ್ ಹೊಡೆದು ಮುಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದಾಗಿ ಇಂದು ಗ್ರಾಮ ಪಂಚಾಯ್ತಿ ಸದಸ್ಯೆಯ ಅತ್ತೆಯ ಅಂತ್ಯ ಸಂಸ್ಕಾರಕ್ಕೆ ತೆರಳಲು ದಾರಿಯಿಲ್ಲದೇ ಪರದಾಡುವಂತಾಗಿದ್ದು, ಗ್ರಾಮಸ್ಥರು ಜಿಲ್ಲಾಡಳಿತ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಉಪ ತಹಶೀಲ್ದಾರ್ ಹಾಗೂ ಕಾರ್ಯದರ್ಶಿ ಪರಿಶೀಲನೆ ನಡೆಸಿದರು. ಈ ವೇಳೆ, ಅಧಿಕಾರಿಗಳ ನಡುವೆ ಖಾಸಗಿ ಜಮೀನಿನ ಮಾಲೀಕರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ನಡುವೆ ಮಾತಿನ ಚಕಮಕಿಯೇ ನಡೆಯಿತು.
ಉಪ ತಹಶೀಲ್ದಾರ್ ಪ್ರತಿಕ್ರಿಯೆ : ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ತಹಶೀಲ್ದಾರ್ ಸುರೇಶ್ ಅವರು, ಸ್ಮಶಾನಕ್ಕೆ ಹೋಗುವುದಕ್ಕೆ ಅಧಿಕೃತವಾದ ರಸ್ತೆ ಇಲ್ಲ. ಈಗಾಗಲೇ ಇದ್ದ ರಸ್ತೆ ಮುಚ್ಚಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಸದಸ್ಯರು ಮತ್ತು ಗ್ರಾಮಸ್ಥರು ದೂರು ನೀಡಿದರು. ಹೀಗಾಗಿ ನಾನು ಮತ್ತು ನಮ್ಮ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಹೀಗಿರುವ ಮಾಹಿತಿ ಪ್ರಕಾರ ವಿಲೇಜ್ ಮ್ಯಾಪ್ ಮತ್ತು ಸರ್ವೇ ದಾಖಲೆಗಳಲ್ಲಿ ಈ ಜಮೀನಿನಲ್ಲಿ ಅಧಿಕೃತವಾದ ರಸ್ತೆ ಸಂಪರ್ಕ ವ್ಯವಸ್ಥೆ ಇಲ್ಲ.
ಹೀಗಾಗಿ 6 ಜಾಗವನ್ನು ಬಿಟ್ಟು ಕೊಡಿ ಗ್ರಾಮ ಪಂಚಾಯಿತಿಯಿಂದ ರಸ್ತೆ ಅಭಿವೃದ್ದಿ ಮಾಡುತ್ತಾರೆ ಎಂದು ನಾವು ಜಮೀನಿನ ಹಿಡುವಳಿದಾರನ್ನು ಕೇಳಿದೆವು, ಆದರೆ ಇಲ್ಲಿನ ಇವರ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ರಸ್ತೆ ಮಾಡಲು ಜಾಗ ನೀಡುವುದಿಲ್ಲ ಎಂದು ಭೇಟಿ ನೀಡಿದ್ದ ಸ್ಥಳದಲ್ಲೇ ಹೇಳಿದ್ದಾರೆ. ಈ ಸಂಬಂಧ ಮುಂದೆ ಗ್ರಾಮಸ್ಥರ ಜೊತೆ ಮಾತನಾಡಿ ಪರಿಹಾರಿಸಿಕೊಳ್ಳದಿದ್ದರೇ, ಗ್ರಾಮಸ್ಥರು ಎಲ್ಲರೂ ಸೇರಿ ರಸ್ತೆ ಮಾಡುವ ಬಗ್ಗೆ ಅರ್ಜಿ ಸಲ್ಲಿಸಲಿ, ಎಲ್ಲಿ ಸ್ಮಶಾನಕ್ಕೆ ಹತ್ತಿರದಲ್ಲಿ ರಸ್ತೆ ಮಾಡಲು ಜಾಗವಿದೆಯೋ ಅದನ್ನು ಗುರುತಿಸಲು ಸರ್ವೇ ಅಧಿಕಾರಿಗಳು ಹಾಗು ಭೂ ಸ್ವಾಧೀನ ಅಧಿಕಾರಿಗಳನ್ನು ಕರೆ ತಂದು ಸರ್ಕಾರದಿಂದ ಜಮೀನನ್ನು ಖರೀದಿ ಮಾಡಲು ಕ್ರಮ ತೆಗೆದುಕೊಳ್ಳಬೇಕು ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ರಾಜ್ಯದ ಎಲ್ಲ ಗ್ರಾಮಗಳಿಗೂ ಸ್ಮಶಾನ ಭೂಮಿ; ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ನೀಡುವುದು ಬಾಕಿ- ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ