ಆನೇಕಲ್ (ಬೆಂ.ಗ್ರಾ): ಲಾಕ್ಡೌನ್ ಆರಂಭವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಕೋವಿಡ್-19 ಬಾಧಿತರ ಸಂಖ್ಯೆ ದ್ವಿಗುಣಗೊಂಡಿರುವುದರ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಆನೇಕಲ್ ತಹಶೀಲ್ದಾರ್ ಸಿ. ಮಹದೇವಯ್ಯ ಅಧಿಕಾರಿಗಳ ತುರ್ತು ಸಭೆ ಕರೆದು ಸಂವಾದ ನಡೆಸಿದರು.
ಆನೇಕಲ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದ ಸಭೆಯ ನೇತೃತ್ವ ವಹಿಸಿ ಕೊರೊನಾ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಪಡೆದು ಮಾತನಾಡಿದರು.
ಗ್ರಾಮೀಣ ಭಾಗಕ್ಕಿಂತ ಪುರಸಭೆ, ನಗರಸಭೆಗಳಲ್ಲಿಯೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಂಬಂಧಿಸಿದ ಸಿಇಒ ಹಾಗೂ ಆರೋಗ್ಯಾಧಿಕಾರಿಗಳನ್ನು ವಿಚಾರಿಸಿದರು.
ಕಂಟೈನ್ಮೆಂಟ್ ವಲಯದ ನಿರ್ಲಕ್ಷ್ಯ, ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಓಡಾಟ, ನಿಗದಿತ ಸಮಯಕ್ಕೆ ಸಿಗದ ವೈದ್ಯಕೀಯ ಸೇವೆ, ಸ್ಯಾನಿಟೈಸೇಷನ್, ನಿಯಮಗಳನ್ನು ಗಾಳಿಗೆ ತೂರಿದ ಬೆನ್ನಲ್ಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆ 624ಕ್ಕೆ ಏರಿದೆ ಎಂದರು.
ಅಧಿಕಾರಿಗಳಿಂದ ನಿರ್ವಹಣೆ ಶೂನ್ಯವಾಗುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಹೋಬಳಿವಾರು ದಿನದ ವರದಿಯೊಂದಿಗೆ ಸ್ಥಳಕ್ಕೆ ಬರುವುದಾಗಿ ಹೇಳಿದರು.