ಬೆಂಗಳೂರು: ಗ್ಯಾಂಗ್ರಿನ್‌ನಿಂದ ಸಣ್ಣಕರುಳನ್ನೇ ಕಳೆದುಕೊಂಡಿದ್ದ 27 ವರ್ಷದ 5 ತಿಂಗಳ ಗರ್ಭಿಣಿಗೆ ಅಪರೂಪದ ಸಣ್ಣ ಕರುಳಿನ ಕಸಿಯನ್ನು ನಗರದ ಪ್ರತಿಷ್ಠಿತ ಫೋರ್ಟಿಸ್ ಖಾಸಗಿ ಆಸ್ಪತ್ರೆ ವೈದ್ಯರು ನಡೆಸಿದ್ದಾರೆ.
ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ನೆಲೆಸಿದ್ದ ಮಹಿಳೆಗೆ ರಕ್ತ ಹೆಪ್ಪುಗಟ್ಟುವಿಕೆಯಿಂದ ಗ್ಯಾಂಗ್ರಿನ್ ಉಂಟಾಗಿ ಸಣ್ಣ ಕರುಳನ್ನೇ ತೆಗೆಯುವಂತಾಗಿತ್ತು. ಮಹಿಳೆ ಉಳಿಯುವುದೇ ಕಷ್ಟ ಎಂದು ಕಾಬೂಲ್‌ನಲ್ಲಿದ್ದ ವೈದ್ಯರು ಕೈ ಚೆಲ್ಲಿದ್ದರು. ಪತಿ ಆಕೆಯನ್ನು ಉಳಿಸಲೇಬೇಕೆಂದು ವಿಮಾನದ ಮೂಲಕ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಹೆಪಟೊ ಪ್ಯಾಂಕ್ರಿಯಾಟೊ ಬೈಲರಿ ಲಿವರ್ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರ ಡಾ. ಮಹೇಶ್ ಗೋಪಾಶೆಟ್ಟಿ ತಂಡ ಯಶಸ್ವಿ ಸಣ್ಣ ಕರುಳಿನ ಕಸಿ ನಡೆಸಿ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ದಾನಿಗಳ ಕೊರತೆಯಿಂದ 3 ತಿಂಗಳು ತಡ:
ಈ ಕುರಿತು ಮಾತನಾಡಿರುವ ಡಾ. ಮಹೇಶ್ ಗೋಪಾಶೆಟ್ಟಿ ಗ್ಯಾಂಗ್ರಿನ್‌ನಿಂದ ಸಣ್ಣ ಕರುಳು ಕಳೆದುಕೊಂಡಿದ್ದ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಆಕೆಗೆ ಅಗತ್ಯವಾಗಿ ಸಣ್ಣ ಕರುಳಿನ ಕಸಿ ಮಾಡಬೇಕಿತ್ತು. ಆದರೆ ಕೋವಿಡ್‌ನಿಂದ ಅಂಗಾಂಗ ದಾನಿಗಳ ಕೊರತೆ ಹೆಚ್ಚಾಗಿದ್ದರಿಂದ 3 ತಿಂಗಳುಗಳ ಕಾಲ ಯಾವುದೇ ದಾನಿಗಳು ದೊರೆಯಲಿಲ್ಲ. ಅದೃಷ್ಟವಶಾತ್ ಮೆದುಳು ನಿಷ್ಕ್ರಿಯಗೊಂಡಿದ್ದ ಒಬ್ಬ ವ್ಯಕ್ತಿಯ ಸಣ್ಣ ಕರುಳನ್ನು ದಾನ ಮಾಡಲು ಕುಟುಂಬ ಒಪ್ಪಿದ ಹಿನ್ನೆಲೆಯಲ್ಲಿ ಆಕೆಗೆ ಶೀಘ್ರವೇ ಕಸಿ ಮಾಡಲಾಯಿತು.
ಕಸಿ ಮಾಡುವ ಪ್ರಕ್ರಿಯೆ ಈಗಾಗಲೇ ತಡವಾಗಿದ್ದರಿಂದ ಆಕೆಯ ದೇಹದಲ್ಲಿ ರಕ್ತಹೆಪ್ಪುಗಟ್ಟುವಿಕೆ ಹೆಚ್ಚಾಗುತ್ತಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿದ ತಂಡ, ವೈದ್ಯಕೀಯ ಗ್ಯಾಸ್ಟೋಎಂಟರಾಲಜಿಸ್ಟ್, ಹೆಮಟಾಲಜಿಸ್ಟ್, ತೀವ್ರ ನಿಗಾ ತಂಡ, ಅರಿವಳಿಕೆ ತಜ್ಞರು ಹಾಗು ಆಹಾರ ತಜ್ಞರ ಬೃಹತ್ ತಂಡ ಈ ಚಿಕಿತ್ಸೆಯಲ್ಲಿ ಪಾಲ್ಗೊಂಡು ಯಶಸ್ವಿ ಸಣ್ಣ ಕರುಳಿನ ಕಸಿ ಶಸ್ತ್ರಚಿಕಿತ್ಸೆ ಮಾಡಲು ನೆರವಾಯಿತು ಎಂದರು.