ದೇವನಹಳ್ಳಿ(ಬೆಂಗಳೂರು): ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2022-23 ಸಾಲಿನ ಮುಂಗಾರು ಹಂಗಾಮಿನಲ್ಲಿ 57370 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ, ರಾಗಿ ಕಟಾವು ಕಾರ್ಯ ಪ್ರಾರಂಭವಾಗಿದೆ, ಈಗಾಗಲೇ ಆಂಧ್ರದಿಂದ ಖಾಸಗಿ ರಾಗಿ ಕಟಾವು ಯಂತ್ರಗಳು ಜಿಲ್ಲೆಗೆ ಕಾಲಿಟ್ಟಿವೆ.
ರಾಗಿ ಕಟಾವು ಮಾಲೀಕರು ರೈತರಿಂದ ಪ್ರತಿ ಗಂಟೆಗೆ 3,500 ರೂಪಾಯಿಂದ 4 ಸಾವಿರ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ, ಹೆಚ್ಚಿನ ದರದಲ್ಲಿ ಬಾಡಿಗೆ ಪಡೆಯುತ್ತಿರುವ ಬಗ್ಗೆ ರೈತರಿಂದ ದೂರುಗಳು ಬಂದಿವೆ, ದೂರಿನ ಹಿನ್ನೆಲೆ ಜಿಲ್ಲಾಧಿಕಾರಿಗಳು ಬಾಡಿಗೆ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ.
ದೊಡ್ಡ ಕಟಾವು ಯಂತ್ರಗಳಿಗೆ ಪ್ರತಿ ಗಂಟೆಗೆ ನಿಗದಿತ 3,350 ರೂ. ಹಾಗೂ ಸಣ್ಣ ಯಂತ್ರಗಳಿಗೆ 2700 ರೂ. ಬಾಡಿಗೆ ಮಾತ್ರ ಸಂಗ್ರಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆರ್ ಲತಾ ಆದೇಶ ಹೊರಡಿಸಿದ್ದಾರೆ.
ರಾಗಿ ಕಟಾವು ಯಂತ್ರದ ಮಾಲೀಕರು ನಿಗದಿ ಮಾಡಿದ ಬಾಡಿಗೆಯನ್ನ ಮಾತ್ರ ರೈತರಿಂದ ಪಡೆಯಬೇಕು, ಒಂದು ವೇಳೆ ಹೆಚ್ಚಿನ ಬಾಡಿಗೆ ಪಡೆದರೆ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಕ್ಕಳ ಬ್ಯಾಗ್ ತಪಾಸಣೆ ವೇಳೆ ಶಿಕ್ಷಕರಿಗೆ ಆಘಾತ.. ಖಾಸಗಿ ಶಾಲಾ ಸಂಘಟನೆಗಳ ಮುಖ್ಯಸ್ಥರ ಸಲಹೆಯೇನು?