ಬೆಂಗಳೂರು: ಭಾರತ್ ಲಾಕ್ಡೌನ್ನಿಂದಾಗಿ ಜನರಿಗೆ ಆಹಾರ ಧಾನ್ಯಗಳ ಕೊರತೆ ಎದುರಾಗಬಾರದು. ಯಾವುದೇ ಲೋಪವಿಲ್ಲದಂತೆ ಪಡಿತರ ವಿತರಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಪಡಿತರ ವಿತರಣೆಗೆ ಸಂಬಂಧಿಸಿದಂತೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉನ್ನತ ಮಟ್ಟದ ಸಭೆ ನಡೆಸಿದರು. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಡಿಸಿಎಂ ಡಾ. ಅಶ್ವತ್ಥ ನಾರಾಯಣ್, ಸಚಿವರಾದ ಗೋಪಾಲಯ್ಯ, ಎಸ್.ಟಿ.ಸೋಮಶೇಖರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪಡಿತರ ವಿತರಣೆಯಲ್ಲಿನ ಲೋಪದೋಶಗಳ ಕುರಿತು ಆಲಿಸಿದ ಸಿಎಂ, ಬಿಪಿಎಲ್ ಕಾರ್ಡುದಾರರು ಹಾಗೂ ಕಾರ್ಡು ಇಲ್ಲದವರಿಗೂ ಪಡಿತರ ವಿತರಣೆಯಾಗಬೇಕು. ವಿತರಣೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಹಾಗೂ ದೂರುಗಳಿಗೆ ಅವಕಾಶವಿಲ್ಲದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಇದಕ್ಕೂ ಮುನ್ನ ಕಾವೇರಿ ನಿವಾಸದಲ್ಲಿ ಸರಳವಾಗಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಡಾ. ಶಾಮಪ್ರಸಾದ್ ಮುಖರ್ಜಿ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಗಳಿಗೆ ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ ನಾರಾಯಣ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಪುಷ್ಪನಮನ ಸಲ್ಲಿಸಿದರು.