ಆನೇಕಲ್: ತಾಲೂಕಿನ ಕಸಬಾ ಹೋಬಳಿಯ ಹೊನ್ನಕಳಸಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದು ಕಾಣೆಯಾಗಿದೆ. ಕಳೆದ ತಿಂಗಳ ಡಿಸೆಂಬರ್ 27ರ ಭಾನುವಾರದಂದು ಚಂದಾಪುರ-ಜಿಗಣಿ ಪುರಸಭೆ ಮತ್ತು ಹೆಬ್ಬಗೋಡಿ ನಗರಸಭೆ ಚುನಾವಣೆಗೆ ತಾಲೂಕು ಆಡಳಿತ ನಿಯೋಜನೆಗೊಂಡಿದ್ದ ಸಂದರ್ಭವನ್ನು ಬಳಸಿಕೊಂಡು ಜೆಸಿಬಿಗಳಿಂದ ಕಟ್ಟಡವನ್ನು ಕೆಡವಿದ್ದಾರೆ ಎಂದು ಸರ್ಕಾರಿ ಇಲಾಖೆಗಳಲ್ಲಿನ ದೂರಿನ ದಾಖಲೆಗಳು ತಿಳಿಸುತ್ತಿವೆ.
1997ರಲ್ಲಿ ನಿರ್ಮಾಣಗೊಂಡ ಶಾಲೆಯಲ್ಲಿ ವಲಸೆ ಹಾಗು ಸ್ಥಳೀಯ ಬಡ ಮಕ್ಕಳು ವಿದ್ಯಾಭ್ಯಾಸ ಮಾಡಿದ್ದಾರೆ. ಇದೀಗ ಕಟ್ಟಡ ತುಸು ಶಿಥಿಲಗೊಂಡಿದ್ದರಿಂದ ಅಡುಗೆ ಉಣಬಡಿಸಲು ಉಪಯೋಗಿಸಲಾಗುತ್ತಿತ್ತು. ಚುನಾವಣಾ ಕಾರ್ಯ ಮುಗಿಸಿ ಮರುದಿನ ಶಾಲೆಗೆ ಬಂದಾಗ ಶಾಲಾ ಕಟ್ಟಡವಿರಲಿಲ್ಲ ಎಂದು ಮುಖ್ಯ ಶಿಕ್ಷಕ ತನ್ನ ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹಾಗು ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯ್ತಿಗೆ ವರದಿ ನೀಡಿದ್ದಾರೆ. ಇದೇ ಶಾಲೆಯ ಅಡುಗೆ ಸಹಾಯಕಿ ಪಾರ್ವತಮ್ಮ ಶಾಲಾ ಕಟ್ಟಡ ನೆಲಸಮಕ್ಕೆ ಕಾರಣ ಎನ್ನಲಾಗುತ್ತಿದ್ದು, ಆಕೆಯೇ ಇದನ್ನು ಒಪ್ಪಿಕೊಂಡಿದ್ದಾಳೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹಿನ್ನಲೆ: ಹೊನ್ನಕಳಸಾಪುರ ಸರ್ಕಾರಿ ಶಾಲೆಗೆ ಗ್ರಾಮದ ಹಿರೀಕರಾದ ನಾಗಮ್ಮ- ಪಟೇಲರ ಮಗ ಕಾಮಯ್ಯ ಜಾಗ ನೀಡಿದ್ದರು. ಆಗಿನ ದಾಖಲೆ ಇದೀಗ ಕಾಣೆಯಾಗಿದೆ. 2000ನೇ ಸಾಲಿನಿಂದೀಚೆಗೆ ಗ್ರಾಮ ಪಂಚಾಯತಿಯಲ್ಲಿ ನಮೂನೆ 9 ಮತ್ತು 11ರ ದಾಖಲೆಯಿದೆ. ಜೊತೆಗೆ ವಿದ್ಯುತ್ ಬಿಲ್ ಅಷ್ಟೇಕೆ ಕಾಮಯ್ಯನ ಹೆಣ್ಣು ಮಕ್ಕಳು ಇದೇ ಶಾಲೆಯಲ್ಲಿಯೇ ವ್ಯಾಸಾಂಗ ಮಾಡಿದ್ದಾರೆ. ಆದರೆ, ಅಡುಗೆ ಸಹಾಯಕಿಯ ಅತ್ತೆ ಕಮಲಮ್ಮನ ಹೆಸರಿಗೆ ಶಾಲೆಯ ಜಾಗದ ಭಾಗ ಬಂದಿದ್ದರಿಂದ ಏಕಾಏಕಿ ಶಾಲಾ ಕಟ್ಟಡವನ್ನು ಸಮಯ ನೋಡಿ ಕೆಡವಲಾಗಿದೆ.
ಇದೀಗ ಎದ್ದಿರುವ ಪ್ರಶ್ನೆ ಎಂದರೆ: ಯಾವುದೇ ಸರ್ಕಾರಿ ಕಟ್ಟಡ ಕಟ್ಟಲು ಜಾಗದ ಸಮರ್ಪಕ ದಾಖಲೆಗಳಿದ್ದರೆ ಮಾತ್ರ ಕಟ್ಟಡ ನಿರ್ಮಿಸಲು ಸಾಧ್ಯ. ನಿರ್ಮಿಸಿರುವ ಕಟ್ಟಡ ಶಾಲಾ ಮಕ್ಕಳಿಗೆ ಉಪಯೋಗವಾಗುತ್ತಿದ್ದರೆ ಅಂತಹ ಕಟ್ಟಡವನ್ನು ಉಳಿಸಿಕೊಳ್ಳಬೇಕು. ಅದೂ ಬಿಟ್ಟು ದಿಢೀರನೆ ಸಂಬಂದಿಸಿದ ಇಲಾಖೆಗಳಿಗೆ ಗೊತ್ತಿಲ್ಲದೆ ಅಕ್ರಮವಾಗಿ ಕಟ್ಟಡ ಕೆಡವಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಂತೆ ಶಿಕ್ಷಕ ಬಿಇಒ ಕಚೇರಿಗೆ ವರದಿ ನೀಡಿದ್ದಾರೆ. ಬಿಇಒ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿ 20 ದಿನಗಳಾದರೂ ಕ್ರಮವಿಲ್ಲ ಎಂದು ಶಿಕ್ಷಣ ಇಲಾಖೆ ದೂರುತ್ತಿದೆ. ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯಿಂದ ತಾಲೂಕು ಪಂಚಾಯಿತಿಗೆ ಮಾಹಿತಿ ನೀಡಿದರು ಇಒ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ, ಇಡೀ ಇಲಾಖೆಗಳಲ್ಲಿ ಅಧಿಕಾರಿ ವರ್ಗಕ್ಕೆ ಬಡಮಕ್ಕಳ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಇಚ್ಛಾಶಕ್ತಿಯಿಲ್ಲ ಎನ್ನುವುದು ಖಾತರಿಯಾಗುತ್ತಿದೆ.