ದೊಡ್ಡಬಳ್ಳಾಪುರ: ಸೀಲ್ಡೌನ್ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕ್ ಗಳಿಂದ ಪೆಟ್ರೋಲ್ ಕಳ್ಳತನವಾಗುತ್ತಿದ್ದು, ಬರುವ ದಿನಗಳಲ್ಲಿ ಬೈಕ್ ಗಳೇ ಕಳ್ಳತನ ಆಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ.
ತಾಲೂಕಿನ ತಳಗವಾರ ಗ್ರಾಮದಲ್ಲಿ ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆ ಸೋಂಕಿತರ ಮನೆಯ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್ ಕಟ್ಟಿದ ಪರಿಣಾಮ ಬೈಕ್ ಗಳನ್ನು ಬ್ಯಾರಿಕೇಡ್ ಹೊರಗಡೆ ನಿಲ್ಲಿಸಲಾಗುತ್ತಿದೆ.
ನಿನ್ನೆ ರಾತ್ರಿ ಬೈಕ್ ಗಳಲ್ಲಿನ ಪೆಟ್ರೋಲ್ ನ್ನ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಪೆಟ್ರೋಲ್ ಕಳ್ಳರಿಂದ ಗ್ರಾಮಸ್ಥರು ಬೈಕ್ ಗಳನ್ನು ಹೊರಗೆ ನಿಲ್ಲಿಸಲು ಭಯ ಪಡುತ್ತಿದ್ದಾರೆ. ಪೆಟ್ರೋಲ್ ಕದಿಯುತ್ತಿರುವ ಕಳ್ಳರು ಬೈಕ್ ಗಳನ್ನೇ ಕದ್ದೊಯ್ದರೆ ಏನು ಮಾಡುವುದು ಎನ್ನುವ ಚಿಂತೆಯಲ್ಲಿದ್ದಾರೆ. ಸದ್ಯ ಗ್ರಾಮಕ್ಕೆ ಬೀಟ್ ಪೊಲೀಸರನ್ನು ಹಾಕುವಂತೆ ಮನವಿ ಮಾಡಿದ್ದಾರೆ.