ದೊಡ್ಡಬಳ್ಳಾಪುರ : ಏರ್ಲೈನ್ಸ್ ಕಂಪನಿಯಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಕೊಡುವುದಾಗಿ ಹೇಳಿ ನೋಂದಣಿ ಮತ್ತು ದಾಖಲೆಗಳ ಪರಿಶೀಲನೆಗಾಗಿ ಹಣ ತೆಗೆದುಕೊಂಡು ಎಂಬಿಎ ವಿದ್ಯಾರ್ಥಿನಿಗೆ ವಂಚಿಸಲಾಗಿದೆ. ಹಣ ಕಳೆದುಕೊಂಡ ಯುವತಿ ಪೊಲೀಸರ ಮೊರೆ ಹೋಗಿದ್ದಾರೆ.
ದೊಡ್ಡಬಳ್ಳಾಪುರ ನಗರದ ಮಾರುತಿನಗರದ ನಿವಾಸಿ ಹೇಮಲತಾ ಎಂಬುವರು ವರ್ಷದ ಹಿಂದೆಯಷ್ಟೇ ಎಂಬಿಎ ಪದವಿ ಪೂರ್ಣಗೊಳಿಸಿದ್ದರು. ನೌಕರಿ ಹುಡುಕುತ್ತಿದ್ದ ಅವರು ಆನ್ಲೈನ್ನಲ್ಲಿ ವಿದ್ಯಾಭ್ಯಾಸದ ದಾಖಲೆ ಅಪ್ಲೋಡ್ ಮಾಡಿ ಕೆಲಸದ ನಿರೀಕ್ಷೆಯಲ್ಲಿದ್ದರು. ಇದೇ ಸಮಯದಲ್ಲಿ ಆಲ್ ಇಂಡಿಯಾ ರೆಕ್ರೂಟ್‌ಮೆಂಟ್ ಫಾರ್ಮ್ ಎಂಬ ಹೆಸರಿನ ಕಂಪನಿಯಿಂದ ಫೋನ್ ಕರೆ ಬಂದಿದೆ.
ಇಂಡಿಗೋ ಏರ್ಲೈನ್ಸ್ನಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಕೊಡಲಾಗುವುದು. ಇದರ ಪ್ರವೇಶ ಶುಲ್ಕವಾಗಿ 2 ಸಾವಿರ ರೂ. ಪಾವತಿಸುವಂತೆ ಕರೆ ಮಾಡಿದವರು ಹೇಳಿದ್ದಾರೆ. ಅಂತೆಯೇ ಹೇಮಲತಾ 2 ಸಾವಿರ ರೂ. ಗೂಗಲ್ ಪೇ ಮಾಡಿದ್ದಾರೆ. ಆ ನಂತರ ದಾಖಲೆಗಳ ಪರಿಶೀಲನೆಗಾಗಿ ಮತ್ತೆ 1,500 ರೂ. ಪಾವತಿಸುವಂತೆ ಕೇಳಿದ್ದಾರೆ. ಆಗ ಅನುಮಾನಗೊಂಡ ಹೇಮಲತಾ, ನನಗೆ ಯಾವುದೇ ಉದ್ಯೋಗ ಬೇಡ ಹಣ ವಾಪಸ್ ಮಾಡುವಂತೆ ಹೇಳಿದ್ದಾರೆ.
ಆದರೆ, ಅನ್ಲೈನ್ ನೋಂದಣಿಯನ್ನು ರದ್ದು ಮಾಡಬೇಕಾದರೆ 2,899 ರೂ. ಕಟ್ಟಬೇಕೆಂದು ವಂಚಕರು ಹೇಳಿದ್ದಾರೆ. ಇದಾದ ಮೇಲೆ ಮತ್ತೆ ಫೋನ್ ಮಾಡಿದ ಕಂಪನಿಯವರು ನಿಮ್ಮ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಹಣ ಕೊಡದಿದ್ದರೆ ಎಲ್ಲೂ ಕೆಲಸ ಸಿಗದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಗೊಂಡ ಹೇಮಲತಾ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಸೈಬರ್ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಕೆಲಸಕ್ಕೆ ತೆರಳುವ ಪೋಷಕರು, ಮಗುವಿನ ಮೇಲೆ ಕೌರ್ಯ ಮೆರೆಯುವ ಆಯಾ.. ಇಲ್ಲಿದೆ ಸಿಸಿಟಿವಿ ದೃಶ್ಯ!