ದೊಡ್ಡಬಳ್ಳಾಪುರ: ಮದುವೆಯಾದ ಮೂರೇ ತಿಂಗಳಿಗೆ ನವ ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ತಿಪ್ಪಾಪುರದಲ್ಲಿ ನಡೆದಿದೆ.
ಆಶಾ (25) ಮೃತ ಮಹಿಳೆ. ಕೆಲ ತಿಂಗಳ ಹಿಂದೆ ಬಿಎಂಟಿಸಿ ಬಸ್ ಕಂಡಕ್ಟರ್ನೊಂದಿಗೆ ವಿವಾಹವಾಗಿದ್ದ ಆಶಾ ಗಂಡನ ಕಿರುಕುಳಕ್ಕೆ ಪ್ರಾಣ ಕಳೆದುಕೊಂಡಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ. ಆಶಾ ಬಾತ್ ರೂಮ್ನಲ್ಲಿ ಕುಸಿದು ಬಿದ್ದಿದ್ದಳು ಆಗ ಆಸ್ಪತ್ರೆಗೆ ಸೇರಿಸುವ ಮುನ್ನವೇ ಸಾವನ್ನಪ್ಪಿದ್ದಾಳೆ. ಹೀಗಾಗಿ ಈ ಸಾವು ಸಂಬಂಧಿಕರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಮೃತ ಮಹಿಳೆ ಆಶಾ ತುಮಕೂರಿನ ಪಾವಗಡ ಮೂಲದವರು. ಕೆಲ ತಿಂಗಳ ಹಿಂದೆ ದೊಡ್ಡಬಳ್ಳಾಪುರದ ತಿಪ್ಪಾಪುರದ ಮುಂಜುನಾಥ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಒಬ್ಬನೇ ಮಗ ಕೆ ಎಸ್ ಆರ್ ಟಿಸಿ ಯಲ್ಲಿ ಬಸ್ ಕಂಡಕ್ಟರ್ ಅನ್ನುವ ಕಾರಣಕ್ಕೆ ಮಗಳು ಚೆನ್ನಾಗಿರ್ತಾಳೆ ಅಂತಾ 100 ಗ್ರಾಂ ಚಿನ್ನಾಭರಣ ಕೊಟ್ಟು, 12 ಲಕ್ಷ ಹಣ ಖರ್ಚು ಮಾಡಿ ಪೋಷಕರು ಅದ್ಧೂರಿ ಮದುವೆ ಮಾಡಿದ್ರು. ಅದರೆ ಹಣದಾಸೆಗೆ ಅಮ್ಮ ಮಗ ಸೇರಿ ಮಗಳನ್ನು ಕೊಲೆ ಮಾಡಿದ್ದಾರೆಂದು ಆಶಾಳ ಸಹೋದರಿ ಆರೋಪಿಸಿದ್ದಾರೆ.
ಗಂಡ-ಅತ್ತೆ ಸೇರಿ ಆಶಾಳನ್ನು ಚೆನ್ನಾಗಿ ಥಳಿಸಿ ನೇಣು ಹಾಕಿದ್ದಾರೆ. ಅನಂತರ ಗಂಡ ಕೆಲಸಕ್ಕೆಂದು ಹೋದರೆ ಅತ್ತೆ ಹಾಲು ತಗೊಂಡು ಡೇರಿಗೆ ಹೋಗಿದ್ದಳಂತೆ. ಅನಂತರ ಮನೆಗೆ ಬಂದು ಸೊಸೆ ಬಾತ್ ರೂಮ್ನಲ್ಲಿ ಕುಸಿದು ಬಿದ್ದಿರುವ ನಾಟಕವಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಕೆಯನ್ನ ಮನೆಯಲ್ಲಿಯೇ ಹೊಡೆದು ಸಾಯಿಸಿ ಈಗ ನಾಟಕವಾಡುತ್ತಿದ್ದಾರೆಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಆಶಾ ಗಂಡ ಸೈಕೋ ರೀತಿ ವರ್ತನೆ ಮಾಡುತ್ತಿದ್ದ ಹಾಗೂ ಗಾಂಜಾ ಸೇದುತ್ತಾನೆ ಎನ್ನಲಾಗ್ತಿದೆ. ಇದಲ್ಲದೇ ಪ್ರತಿ ಅಮಾವಾಸ್ಯೆಯ ಮಧ್ಯರಾತ್ರಿ ಅತ್ತೆ ಮತ್ತು ಗಂಡ ಸೇರಿ ಆಶಾಳಿಗೆ ವಾಮಚಾರ ಮಾಡಿ, ಆಕೆಗೆ ಊಟವನ್ನು ನೀಡುತ್ತಿರಲಿಲ್ಲವಂತೆ. ಈ ಬಗ್ಗೆ ಆಶಾ ಫೋನ್ ಮಾಡಿ ತನ್ನ ಕಷ್ಟಗಳನ್ನು ಹೆತ್ತವರ ಬಳಿ ಹೇಳಿ ಕೊಳ್ಳುತ್ತಿದ್ದಳೆಂದು ಸಂಬಂಧಿಕರು ವಿವರಿಸಿದ್ದಾರೆ.
ಸದ್ಯ ಮೃತ ಆಶಾಳ ಗಂಡ ಮಂಜುನಾಥ್ ಪೊಲೀಸರ ವಶದಲ್ಲಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.