ಆನೇಕಲ್ (ಬೆಂಗಳೂರು): ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಕ್ರೆಡಿಟ್ ಯಾರಿಗೂ ಸೇರುವುದಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಹಣ ಹಾಕಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. ಆನೇಕಲ್ದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಂಚರತ್ನ ರಥ ಯಾತ್ರೆ ಕಾರ್ಯಕ್ರಮ ವೇಳೆ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಉದ್ಘಾಟಿಸಿದ್ದಾರೆ. ಈ ಮೊದಲು ನಾಲ್ಕು ಪಥ ರಸ್ತೆ ಇತ್ತು. ಕಾಂಗ್ರೆಸ್ ಯುಪಿಎ ಅವಧಿಯಲ್ಲಿ ಕೆಲಸ ನೆನೆಗುದಿಗೆ ಬಿದ್ದಿತ್ತು.
ನಾನು ಸಿಎಂ ಅದ ಬಳಿಕ ಅದನ್ನು ಜಾರಿಗೆ ತಂದಿದ್ದು, ರಸ್ತೆ ನೀಡಿರುವ ಭೂಮಿ ರಾಜ್ಯದ ರೈತರ ಭೂಮಿಯಾಗಿದೆ. ಕನ್ನಡಿಗರ ದುಡ್ಡು ರಸ್ತೆ ಅಭಿವೃದ್ಧಿಗೆ ಬಳಕೆಯಾಗಿದೆ. ಈ ರೀತಿ ಬಾಲಿಶ ಹೇಳಿಕೆ ಸರಿಯಲ್ಲ ಎಂದು ಆರೋಪಿಸಿದರು.
ಮೈಸೂರಿನ ಮಹಾರಾಜರು ಮೊದಲು ರಸ್ತೆ ಆರಂಭ ಮಾಡಿದ್ದಾರೆ. ನಂತರ ಬಂದ ರಾಜಕಾರಣಿಗಳು ಮೇಲ್ದರ್ಜೆಗೇರಿಸಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಕೆಲಸ ಮಾಡೋದ್ರಲ್ಲಿ ತೋರಿಸಬೇಕು. ನಮ್ಮಿಂದಲೇ ಆಗಿದ್ದು ಅಂತ ಹೈವೋಲ್ಟೇಜ್ ಕ್ರೆಡಿಟ್ ಪಡೆಯೋದಲ್ಲ. ಮೈಸೂರು ಬೆಂಗಳೂರು ರಸ್ತೆಯಿಂದಾಗಿ ಸಾವಿರಾರು ಜನ ಬೀದಿಗೆ ಬಿದ್ದಿದ್ದಾರೆ. ಅವರ ಜೀವನ ಉನ್ನತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಕೆಲಸ ಮಾಡಿ ಕ್ರೆಡಿಟ್ ತೆಗೆದುಕೊಳ್ಳಲಿ ಎಂದು ಎಚ್ ಡಿಕೆ ಸವಾಲು ಹಾಕಿದರು.
ಮಂಡ್ಯಕ್ಕೆ ಮೋದಿ ಬಂದ್ರು ಹೋದ್ರು, ಇದರಿಂದ ಏನೂ ಆಗೋದಿಲ್ಲ. ಬಿಜೆಪಿಗೆ ಯಾವುದೇ ಪ್ಲಸ್ ಆಗೋದಿಲ್ಲ. ಬಿಜೆಪಿ ನಾಯಕರ ನಡವಳಿಕೆ ಜಾಹೀರಾತಿಗಷ್ಟೇ ಸೀಮಿತವಾಗಿದೆ. ಬಿಜೆಪಿ ಕಾರ್ಯಕ್ರಮ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ರೀತಿ ಇದೆ. ಅವರ ಜಾಹೀರಾತು, ಪ್ರಚಾರ ಭರಾಟೆಗೆ ಜನ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಎರಡು ದಿನ ಖುಷಿಗೆ ಬಿಜೆಪಿಯವರು ಪ್ರಚಾರ ಮಾಡುತ್ತಾರೆ. ಹತ್ತು ಸಾವಿರ ಕೋಟಿ ಬಿಜೆಪಿ ನೀಡಿಲ್ಲ. ಹತ್ತು ಸಾವಿರ ಕೋಟಿ ಜನರ ಬಳಿ ವಸೂಲಿ ಮಾಡಿ ಗುತ್ತಿಗೆದಾರನಿಗೆ ಇಂತಿಷ್ಟು ಕೊಡಬೇಕು. ಉಳಿದದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಡೆದುಕೊಳ್ಳಲಿದೆ ಎಂದು ಬಿಜೆಪಿಗರ ವಿರುದ್ಧ ಅವರು ಹರಿಹಾಯ್ದರು.
ನಮ್ಮ ಸಂಸ್ಕೃತಿ ಮೆರೆದ ಸುಮಲತಾ : ಮೋದಿಗೆ ಸುಮಲತಾ ಬೆಲ್ಲ ವಿತರಣೆ ಮಾಡಿ ನಮ್ಮ ಸಂಸ್ಕೃತಿ ಮೆರೆದಿದ್ದಾರೆ. ಅದೊಂದು ನಮ್ಮಲ್ಲಿ ಒಂದು ಸಂಸ್ಕೃತಿ ಇದೆ. ಯಾರೇ ಅತಿಥಿಗಳು ಬಂದ್ರೂ ಅವರನ್ನು ಸತ್ಕರಿಸುವುದು ರೂಢಿ. ಹೀಗಾಗಿ ಬೆಲ್ಲ ಕೊಟ್ಟು ಸಂಸ್ಕೃತಿ ಮೆರೆದಿರಬಹುದು ಎಂದು ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಜೆಡಿಎಸ್ ಪಂಚರತ್ನ ಯಾತ್ರೆಗೆ ಜನಸ್ಪಂದನೆ: ಜೆಡಿಎಸ್ ಪಂಚರತ್ನ ರಥ ಯಾತ್ರೆಯು ಆನೇಕಲ್ದಲ್ಲಿ ಯಶಸ್ವಿಯಾಗಿದೆ. ಆನೇಕಲ್ ಸರ್ಜಾಪುರ, ಅತ್ತಿಗೇರಿಯಲ್ಲಿ ಮಂಜಣ್ಣ, ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜು ಹಾಗೂ ದೇವೆಗೌಡರು ಒಟ್ಟಾಗಿ ಸೇರಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಿದ್ದಾರೆ. ಇಂದು ಪಂಚರತ್ನ ರಥ ಯಾತ್ರೆಯಲ್ಲಿ ಜನರು ಸೇರಿದ್ದೂ ನೋಡಿದ್ರೆ, ಪಕ್ಷದಲ್ಲಿ ಗೆಲುವಿನ ವಾತಾವರಣ ಕಂಡು ಬರುತ್ತಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜು ಅವರಿಗೆ ಜನರ ಬೆಂಬಲ ಅಪಾರ ಇದೆ ಎಂದು ತಿಳಿಸಿದರು.
ಇದನ್ನೂಓದಿ:ಕಾಂಗ್ರೆಸ್ ನನ್ನ ಸಮಾಧಿ ತೋಡುವ ಕನಸು ಕಾಣುತ್ತಿದೆ : ಮಂಡ್ಯದಲ್ಲಿ ಮೋದಿ ವಾಗ್ದಾಳಿ