ಬೆಂಗಳೂರು: ನಗರದ ಅರಮನೆ ರಸ್ತೆಯ ಹೋಟೆಲ್ ಬಳಿ ಎಎಸ್‌ಐ ಮೇಲೆ ಕಾರು ಹರಿಸಿ ಕೊಲೆ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಕೇರಳ ಮೂಲದ ಎಂ.ಶರೂನ್, ತಮಿಳುನಾಡಿನ ರಿಬಿನ್ ಹಾಗೂ ಡಿ.ಜೆ.ಹಳ್ಳಿಯ ಸೈಯದ್ ಅಹಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಾದ ಜೈಸನ್ ವರ್ಗೀಸ್, ಪ್ರಣವ್, ರಫಿಕ್‌ಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಘಟನೆ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಬ್ಬನ್‌ಪಾರ್ಕ್ ಎಎಸ್‌ಐ ಹನುಮಂತರಾಜು ಎಂಬುವರ ಮೇಲೆ ಕಾರು ಹರಿಸಿದ್ದಾರೆ. ಇದರಿಂದ ಹನುಮಂತರಾಜು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯೋರ್ವರಿಗೆ ಆರೋಪಿಗಳು ಬ್ಯಾಂಕ್ ಮೂಲಕ ಸಾಲ ಕೊಡಿಸುವುದಾಗಿ ನಂಬಿಸಿದ್ದರು. 25 ಲಕ್ಷ ರೂ.ಸಾಲ ಕೊಡಿಸುವುದಾಗಿ ಹೇಳಿ ಬಳಿಕ 3 ಲಕ್ಷ ರೂ. ಹಣವನ್ನು ಕಮಿಷನ್ ರೂಪದಲ್ಲಿ ಪಡೆದು ವಂಚನೆ ಮಾಡಿದ್ದರೆಂಬ ಪ್ರಕರಣ ದಾಖಲಾಗಿತ್ತು.
ಘಟನೆ ಸಂಬಂಧ ಮೋಸ ಹೋದ ಮಹಿಳೆ ಕಬ್ಬನ್‌ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬೆನ್ನಟ್ಟಿದ್ದರು. ಅರಮನೆ ರಸ್ತೆಯಲ್ಲಿರುವ ಹೋಟೆಲ್‌ಗೆ ಆರೋಪಿಗಳ ತಂಡ ಬರುವ ಮಾಹಿತಿಯಿತ್ತು. ಖಚಿತ ಮಾಹಿತಿ ಮೇರೆಗೆ ಕಬ್ಬನ್‌ಪಾರ್ಕ್ ಪೊಲೀಸರ ತಂಡ ಹೋಟೆಲ್ ಮೇಲೆ ದಾಳಿ ಮಾಡಿದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಎಎಸ್‌ಐ ಬೈಕ್ ಮೇಲೆ ಕುಳಿತಾಗ ಆರೋಪಿ ಅವರ ಮೇಲೆ ಕಾರು ಹರಿಸಲು ಯತ್ನಿಸಿದ್ದ. ಘಟನೆಯಲ್ಲಿ ಬೈಕ್ ಜಖಂಗೊಂಡು ಎಎಸ್‌ಐ ತಲೆ, ಎಡಗಣ್ಣು, ಎಡಗಾಲಿಗೆ ಗಂಭೀರ ಗಾಯಗಳಾಗಿದ್ದವು. ಗಾಯಗೊಂಡ ಎಎಸ್ಐ ಅವರು ಹಾಸ್‌ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.