ನೆಲಮಂಗಲ: ಕೊರೊನಾ ಮಹಾಮಾರಿ ಇಡೀ ಕುಟುಂಬವನ್ನೇ ಆಹುತಿ ಪಡೆದುಕೊಂಡ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.
ಸೋಂಕಿನ ಮೊದಲ ಅಲೆಯಲ್ಲಿ ಗಂಡ ಮತ್ತು ಅತ್ತೆ ಸಾವನ್ನಪ್ಪಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಪತಿಯ ಅಗಲಿಕೆಯ ನೋವು ತಾಳಲಾರದೆ ಹೆಂಡತಿ ತನ್ನ ಮಗನೊಂದಿಗೆ ಇದೀಗ ರೈಲಿಗೆ ತಲೆಕೊಟ್ಟು ಸಾವಿನ ಹಾದಿ ಹಿಡಿದಿದ್ದಾರೆ.
ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ರೈಲಿಗೆ ತಲೆಕೊಟ್ಟು ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಖಾ (40), ಮಗ ಮನೋಜ್ (22) ಸಾವಿಗೀಡಾದವರೆಂದು ಗುರುತಿಸಲಾಗಿದೆ. ಇವರು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯ ಸೋಮಶೆಟ್ಟಿಹಳ್ಳಿಯ ನಿವಾಸಿಗಳು.
ರೇಖಾರ ಪತಿ ಶಿವರಾಜ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 20 ರಂದು ಸಾವನ್ನಪ್ಪಿದ್ದರು. ಶಿವಕುಮಾರ್ ಸಾವನ್ನಪ್ಪಿ 9ನೇ ದಿನಕ್ಕೆ ಅವರ ತಾಯಿ ಶಿವಾಂಬಿಕ ಅವರೂ ಕೂಡಾ ಮಾರಕ ವೈರಸ್‌ಗೆ ಪ್ರಾಣ ಕಳೆದುಕೊಂಡಿದ್ದರು. ಕುಟುಂಬದಲ್ಲಿ ಇಬ್ಬರ ಸಾವಿನ ಪರಿಣಾಮ, ರೇಖಾ ಮತ್ತು ಮಗ ಮನೋಜ್ ಮಾನಸಿಕವಾಗಿ ಜರ್ಜರಿತರಾಗಿದ್ದರು ಎಂಬ ಮಾಹಿತಿ ಇದೆ.
ಶಿವಕುಮಾರ್ ಬಿಲ್ಡಿಂಗ್ ಕಂಟ್ರ್ಯಾಕ್ಟರ್ ಆಗಿದ್ದು, ಕುಟುಂಬ ಆರ್ಥಿಕವಾಗಿ ಸುಸ್ಥಿತಿಯಲ್ಲಿತ್ತು. ಮಗ ಮನೋಜ್ ಹೆಸರಿನಲ್ಲಿ ಅಪಾರ್ಟ್‌ಮೆಂಟ್ ಅನ್ನು ಅವರು ಕಟ್ಟಿಸಿದ್ದರು ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಚುಡಾಯಿಸಿದ್ದಕ್ಕೆ ಪೊಲೀಸರಿಗೆ ದೂರು: ಯುವತಿ ಕುಟುಂಬದ ಮೇಲೆ ಆರೋಪಿಗಳಿಂದ ಮಾರಣಾಂತಿಕ ಹಲ್ಲೆ