ನೆಲಮಂಗಲ : ಖಾಸಗಿ ಶಾಲಾ ಶುಲ್ಕದ ಬಗ್ಗೆ ಸರ್ಕಾರದಲ್ಲಿ ಚರ್ಚೆ ನಡೆಯುತ್ತಿದೆ. ಪೋಷಕರಿಗೆ ಹೊರೆಯಾಗದಂತೆ ಮತ್ತು ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಸಿಗುವಂತೆ ವರದಿಯನ್ನ ಅಧಿಕಾರಿಗಳು ಸಿದ್ದಪಡಿಸುತ್ತಿದ್ದಾರೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಓದಿ: ಆರೋಪಿ ಪರ ವಕಾಲತ್ತು ವಹಿಸದಂತೆ ನಿರ್ಬಂಧಿಸುವ ಅಧಿಕಾರ ಸಿಕ್ಕಿದ್ದೇಗೆ?: ವಕೀಲರ ಸಂಘಕ್ಕೆ ಹೈಕೋರ್ಟ್ ಪ್ರಶ್ನೆ
ನೆಲಮಂಗಲ ತಾಲೂಕಿನ ಅಂಬೇಡ್ಕರ್ ನಗರದಲ್ಲಿ 2009ರಲ್ಲಿ ಪ್ರಾರಂಭವಾದ ಟೆಂಟ್ ಶಾಲೆ ಈಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿದೆ. ಈ ಶಾಲೆಯ ಉದ್ಘಾಟನೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಹಿಂದುಳಿದ ಜನಾಂಗದವರು ಮತ್ತು ಉತ್ತರ ಕರ್ನಾಟಕದ ವಲಸಿಗರಿಗೆ ನೆರವಾದ ಟೆಂಟ್ ಶಾಲೆ ಇಂದು ಸುಸಜ್ಜಿತವಾಗಿ ಸಿದ್ಧವಾಗಿದೆ. ಸ್ಥಳೀಯ ಶಾಸಕರು ಶಾಲೆಯನ್ನು ದತ್ತು ಪಡೆದಿದ್ದು, ಶಾಲೆಯ ಅಭಿವೃದ್ಧಿಗೆ ಮೂಲಸೌಕರ್ಯ ಕೊಡಲಾಗುವುದು.
ಖಾಸಗಿ ಶಾಲಾ-ಕಾಲೇಜುಗಳ ಶುಲ್ಕ ನಿಗದಿ ವಿಚಾರ ಚರ್ಚೆಯಲ್ಲಿದೆ. ಮೊನ್ನೆ ಆಯುಕ್ತರ ಸಭೆ ನಡೆದಿದೆ, ಅವರು ವಿವರ ಕೊಡುತ್ತಾರೆ. ಪೋಷಕರಿಗೆ ಯಾವುದೇ ಹೊರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಮಾಡಲಾಗುವುದು. ಗ್ರಾಮೀಣ ಪ್ರದೇಶಕ್ಕೂ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.