ಬೆಂಗಳೂರು: ಕೆಲ ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಸೀಟುಗಳ ದಂಧೆಯಲ್ಲಿ ತೊಡಗಿರುವುದು ನಿಜವಾಗಿದ್ದು, ಈ ಸಂಬಂಧ ಸರ್ಕಾರದ ಸಮಿತಿ ವರದಿ ನೀಡಿದ್ದು ವರದಿಯನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ತಪ್ಪಿತಸ್ಥ ಕಾಲೇಜುಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ರವಿಕುಮಾರ್, ವೈದ್ಯಕೀಯ ಸೀಟುಗಳ ದಂಧೆ ನಡೆಯುತ್ತಿದೆ, ಸೀಟ್ ಬ್ಲಾಕಿಂಗ್ ದಂಧೆ ನಡೆಯಿತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಹಳ ವರ್ಷಗಳಿಂದ ದಂಧೆ ನಡೆಯಿತ್ತಿರುವುದು ಸತ್ಯ, ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಕೆಲವು ವೈದ್ಯಕೀಯ ಕಾಲೇಜುಗಳು ಸುಪ್ರೀಂಕೋರ್ಟ್ ಆದೇಶವನ್ನು ಅವರಿಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುತ್ತಿವೆ ಅದಕ್ಕೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಅವರು ವರದಿ ಕೊಟ್ಟಿದ್ದಾರೆ, ಅದರಂತೆ ದಂಡವನ್ನು ಹೆಚ್ಚು ಮಾಡಲಿದ್ದೇವೆ, ಸೀಟು ಸರೆಂಡರ್ ಮಾಡಲು 25 ಲಕ್ಷ ದಂಡ ವಿಧಿಸುತ್ತೇವೆ. ಅಷ್ಟು ಹಣ ಕೊಟ್ಟು ಯಾರೂ ಇನ್ಮೆಂದೆ ಸೀಟುಗಳನ್ನು ಸರಂಡರ್ ಮಾಡಲ್ಲ ಎಂದರು.
ಈಗಾಗಲೇ ತನಿಖಾ ಸಂಸ್ಥೆಗಳು ಸೀಟ್ ಬ್ಲಾಕಿಂಗ್ ಬಗ್ಗೆ ದಾಳಿ ನಡೆಸಿ ತನಿಖೆ ಆರಂಭಿಸಲಾಗಿದೆ, ಕಪ್ಪುಹಣಕ್ಕೆ ನಾವು ನೋಟಿಸ್ ಕೊಡಲು ಸಾಧ್ಯವಿಲ್ಲ, ಕೇಂದ್ರದ ಐಟಿ ಇಲಾಖೆ ತನಿಖೆ ನಡೆಯಲಿದೆ, ದಾಳಿ ಮಾಡಿ ಹಣ ವಶಪಡೆದಿದೆ, ಹಾಗಾಗಿ ರಾಜ್ಯ ಸರ್ಕಾರ ಯಾವುದೇ ನೋಟಿಸ್ ನೀಡಿಲ್ಲ ನಮ್ಮ ವಶದಲ್ಲಿರುವ ವೈದ್ಯಕೀಯ ಕಾಲೇಜು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ, ತಪ್ಪಿತಸ್ಥ ಕಾಲೇಜುಗಳನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲು ಪರಿಶೀಲನೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.