ಬೆಂಗಳೂರು : ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನು ಕರ್ನಾಟಕಕ್ಕೆ ಬರಲು ಬಿಡವುದಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸಚಿವರು ಕರ್ನಾಟಕ ಬರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮಹಾರಾಷ್ಟ್ರದಲ್ಲಿ ಎಂಇಎಸ್ ವರ್ಚಸ್ಸು ಕಡಿಮೆ ಆಗುತ್ತಿದ್ದಂತೆ ಈ ರೀತಿ ಮಾಡುತ್ತಿದ್ದಾರೆ.
ಅವರಿಗೆ ಅಸ್ತಿತ್ವ ಇಲ್ಲದಾಗ ಕ್ಯಾತೆ ತೆಗೆಯುತ್ತಾರೆ. ಮಹಾಜನ್ ವರದಿಯೇ ಅಂತಿಮ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು, ಸುಪ್ರೀಂ ಕೋರ್ಟ್ ನಲ್ಲಿ ದಾಖಲೆ, ಜನಾಭಿಪ್ರಾಯ ಎಲ್ಲವೂ ನಮ್ಮ ಪರವಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಶಿವಸೇನೆ ನಾಟಕ ಕಂಪನಿ ಇದ್ದಂತೆ. ಅವರು ಆಗಾಗ ಈ ರೀತಿ ನಾಟಕ ಮಾಡುತ್ತಾರೆ. ನೆಲ, ಜಲ ವಿಚಾರ ಬಂದಾಗ ನಮ್ಮ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ನಾವು ಅದನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇರುವಾಗ ಈ ರೀತಿ ಮಾಡಬಾರದು ಎಂದು ಹೇಳಿದರು.
ಸಿಎಂ ಬಳಿ ನಾನು ಕೂಡ ಮಾತನಾಡುತ್ತೇನೆ. ಕೆಲಸ ಇಲ್ಲದೇ ಇರುವುದರಿಂದ ಅವರು ಮತ್ತೆ ಮತ್ತೆ ಗಡಿ ಕ್ಯಾತೆ ತೆಗೆಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇವೆ. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ. ಇದೆಲ್ಲಾ ಎಲೆಕ್ಷನ್ ಸ್ಟಂಟ್, ಇದಕ್ಕೆ ಯಾರೂ ಬೆಲೆ ಕೊಡಲ್ಲ. ನಮ್ಮ ಸರ್ಕಾರ ನೆಲ, ಜಲ ವಿಷಯದಲ್ಲಿ ಯಾರಿಗೂ ಮಣಿಯುವುದಿಲ್ಲ. ಕರ್ನಾಟಕದ ಭಾಗದ ರಕ್ಷಣೆಗೆ ನಾವು ಯಾವತ್ತೂ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ಇಲ್ಲ: ಬೆಳಗಾವಿ ಡಿಸಿ ನಿತೇಶ್