ದೊಡ್ಡಬಳ್ಳಾಪುರ: ನಗರದ ಹೊರವಲಯದ ಕಾವೇರಿ ಬಡಾವಣೆಯಲ್ಲಿ ತಲೆ ಎತ್ತುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಆಗ್ರಹಿಸಿರುವ ಬಡಾವಣೆ ನಿವಾಸಿಗಳು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕಳೆದ 20 ವರ್ಷಗಳಿಂದ ಶಿಕ್ಷಕರು, ಉಪನ್ಯಾಸಕರು, ಇಂಜಿನಿಯರ್ಗಳೇ ವಾಸವಾಗಿರುವ ಈ ಬಡವಾಣೆ ಪ್ರಶಾಂತವಾಗಿದೆ. ಆದರೆ ಆರಂಭಗೊಳ್ಳಲು ಸಿದ್ಧವಾಗಿರುವ ಬಾರ್ನಿಂದಾಗಿ ಎಲ್ಲಿ ನಮ್ಮ ನೆಮ್ಮದಿಗೆ ಭಂಗವಾಗುತ್ತದೋ ಎಂಬ ಆತಂಕ ಬಡಾವಣೆ ನಿವಾಸಿಗಳಲ್ಲಿ ಮನೆ ಮಾಡಿದೆ.
ಅಲ್ಲದೆ, ಬಾರ್ ಸನಿಹದಲ್ಲಿ ಮುತ್ಯಾಲಮ್ಮ ದೇವಸ್ಥಾನ, ಜಾಲಪ್ಪ ಕಾಲೇಜ್, ಜ್ಞಾನ ಗಂಗಾ ಪ್ರೈಮರಿ ಮತ್ತು ಹೈಸ್ಕೂಲ್ ಸಹ ಇದೆ. ಇದೇ ರಸ್ತೆಯಲ್ಲಿ ನಿತ್ಯ ಹಲವಾರು ಹೆಣ್ಣು ಮಕ್ಕಳು ಓಡಾಡುತ್ತಿದ್ದಾರೆ. ಒಂದು ವೇಳೆ ಬಾರ್ ಶುರುವಾದರೆ ಕುಡುಕರ ಹಾವಳಿಯಿಂದ ಇಲ್ಲಿನ ಸುಂದರ ವಾತಾವರಣ ಹಾಳಾಗುತ್ತದೆ ಎಂಬುದು ಬಡಾವಣೆ ನಿವಾಸಿಗಳ ವಾದ.
ಹೀಗಾಗಿ ಬಾರ್ ತೆರೆಯಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದೆಂದು ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿ ಕರೀಗೌಡ ಅವರಿಗೆ ಮನವಿ ಮಾಡಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಬಾರ್ ತೆಗೆಯಲು ಅನುಮತಿ ನೀಡಿದ್ದೇ ಆದಲ್ಲಿ ಬಾರ್ ಮುಂದೆಯೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.