ಆನೇಕಲ್ : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡು ರೋಡಿನಲ್ಲಿ ಪತ್ನಿಯನ್ನು ಪತಿಯ ಗ್ಯಾಂಗ್ ಕೊಚ್ಚಿ ಕೊಲೆಗೈದ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಹೊಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ಕೊಲೆ ನಡೆದಿದೆ. ಜಿಗಣಿ ಮೂಲದ ಅರ್ಚನಾ ರೆಡ್ಡಿ (38) ಎಂಬುವರು ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ 10:30ರ ಸುಮಾರಿಗೆ ಅರ್ಚನಾ ರೆಡ್ಡಿಯ ಎರಡನೇ ಪತಿ ನವೀನ್ ಕುಮಾರ್ ಹಾಗೂ ಸಹಚರರಿಂದ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ.
ಏನಿದು ಘಟನೆ? : ಮೊದಲನೇ ಪತಿ ಬಿಟ್ಟ ನಂತರ ಐದಾರು ವರ್ಷಗಳಿಂದ ನವೀನ್ ಕುಮಾರ್ ಜೊತೆ ಅರ್ಚನಾ ಸಂಬಂಧವಿತ್ತು. ನವೀನ್ ಕುಮಾರ್ ಹಾಗೂ ಅರ್ಚನಾ ರೆಡ್ಡಿ ನಡುವೆ ಚನ್ನಪಟ್ಟಣದಲ್ಲಿರುವ ಆಸ್ತಿ ವಿಚಾರವಾಗಿ ಗಲಾಟೆ ನಡೆದಿತ್ತು. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
![Husband killed to wife over property issue, Husband murder to wife in Bengaluru, Woman murder in Anekal, Anekal crime news, ಆಸ್ತಿ ವಿವಾದದ ಹಿನ್ನೆಲೆ ಪತ್ನಿಯ ಕೊಲೆ ಮಾಡಿಸಿದ ಪತಿ, ಬೆಂಗಳೂರಿನಲ್ಲಿ ಹೆಂಡ್ತಿಯನ್ನು ಕೊಂದ ಪತಿ, ಆನೇಕಲ್ನಲ್ಲಿ ಮಹಿಳೆ ಕೊಲೆ, ಆನೇಕಲ್ ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/kn-bng-01-28-murder-ka10020_28122021123601_2812f_1640675161_917.jpg)
ನಂತರ ನವೀನ್ ಕುಮಾರ್ನಿಂದ ದೂರವಾಗಿ ಮಗ ಮತ್ತು ಅರ್ಚನಾ ರೆಡ್ಡಿ ಬೆಳ್ಳಂದೂರಿನಲ್ಲಿ ವಾಸವಿದ್ದರು. ಅರ್ಚನಾ ರೆಡ್ಡಿ ಮತದಾನಕ್ಕೆ ಬರೋದು ತಿಳಿದಿದ್ದ ನವೀನ್ ಕುಮಾರ್ ಕೊಲೆಗೆ ಸ್ಕೆಚ್ ಹಾಕಿ ಕಾಯ್ತಾ ಇದ್ದ.
ಮತದಾನ ಮುಗಿಸಿ ಮಗ ಮತ್ತು ಕಾರಿನ ಚಾಲಕ ಹಾಗೂ ಇಬ್ಬರು ಯುವಕರ ಜೊತೆ ಬೆಳ್ಳಂದೂರು ಕಡೆ ಹೊರಟಿದ್ದ ಅರ್ಚನಾ ರೆಡ್ಡಿ ವಾಹನಕ್ಕೆ ದುಷ್ಕರ್ಮಿಗಳ ಗುಂಪೊಂದು ಹೊಸ ರೋಡ್ ಸಿಗ್ನಲ್ ಬೀಳುತ್ತಿದ್ದಂತೆ ಅಡ್ಡ ಹಾಕಿ ಅಟ್ಯಾಕ್ ಮಾಡಿದೆ.
ಮಗ ಹಾಗೂ ಚಾಲಕ ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದಾರೆ. ಹಾಕಿ ಸ್ಟಿಕ್ ಮತ್ತು ಲಾಂಗ್ನಿಂದ ಅರ್ಚನಾ ರೆಡ್ಡಿಯನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.