ನೆಲಮಂಗಲ: ಪುರಸಭೆ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಗಳಿಗೆ ಹೈಕೋರ್ಟ್ನಿಂದ ತಡೆಯಾಜ್ಞೆ ಆದೇಶದ ಪ್ರತಿ ನೀಡಿ ಅರ್ಜಿ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ಚುನಾವಣಾಧಿಕಾರಿಗಳು ಹೇಳಿ ಕಳುಸುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಇದೇ ಕಾರಣಕ್ಕೆ ಚುನಾವಣಾ ಅಧಿಕಾರಿ ಮತ್ತು ಉಮೇದುದಾರರ ನಡುವೆ ವಾಗ್ವಾದ ನಡೆದಿದೆ.
ರಾಜ್ಯಾದಾದ್ಯಂತ ಇಂದಿನಿಂದ ಹಲವು ಪುರಸಭೆ ಹಾಗೂ ನಗರಸಭೆಗಳ ಚುನಾವಣೆ ಕಾವು ಹೆಚ್ಚಾಗಿದೆ. ಆದರೆ ಬೆಂಗಳೂರು ಹೊರವಲಯ ನೆಲಮಂಗಲ ಪುರಸಭೆ ಚುನಾವಣೆ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ ಹಿನ್ನೆಲೆಯಲ್ಲಿ ಹಲವು ಅಭ್ಯರ್ಥಿಗಳು ನಾಮಪತ್ರ ಸಮೇತ ಕಚೇರಿಗೆ ಬಂದಿದ್ದಾರೆ. ಆದರೆ ಚುನಾವಣಾಧಿಕಾರಿ ನಾಮಪತ್ರ ಸ್ವೀಕರಿಸಿಲ್ಲ. ಹಾಗಾಗಿ ಚುನಾವಣಾಧಿಕಾರಿ ವಿರುದ್ಧ ಆಕಾಂಕ್ಷಿಗಳು ಕೆಂಡಾಮಂಡಲರಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ನೆಲಮಂಗಲ ಪುರಸಭೆಯನ್ನ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದೇ ಕಾರಣಕ್ಕೆ ಪುರಸಭೆ ಸದಸ್ಯರಾದ ಎ.ಪಿಳ್ಳಪ್ಪ ಮತ್ತು ಎನ್.ಪಿ.ಹೇಮಂತ್‌ಕುಮಾರ್ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಪುರಸಭೆ ಬದಲು ನಗರಸಭೆ ಚುನಾವಣೆ ನಡೆಸಬೇಕೆನ್ನುವುದು ಅರ್ಜಿದಾರರ ವಾದವಾಗಿತ್ತು. ವಿಚಾರಣೆ ಕೈಗೆತ್ತಿಗೊಂಡ ಹೈಕೋರ್ಟ್ ನೆಲಮಂಗಲ ಪುರಸಭೆ ಚುನಾವಣೆಗೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದೆ. ಇದೇ ಕಾರಣದಿಂದ ಉಮೇದುದಾರರ ಅರ್ಜಿಯನ್ನು ಚುನಾವಣಾಧಿಕಾರಿಗಳು ತೆಗೆದುಕೊಳ್ಳದೆ ಹಾಗೇಯೇ ಕಳುಹಿಸುತ್ತಿದ್ದಾರೆ.