ದೊಡ್ಡಬಳ್ಳಾಪುರ: ಹೆಚ್.ವಿಶ್ವನಾಥ್ ಮತ್ತು ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ನಡುವೆ ವಾಕ್ಸಮರ ಮುಂದುವೆರಿದ್ದು, ಹೆಚ್. ವಿಶ್ವನಾಥ್ ರಾಜಕೀಯ ಅಸ್ತಿತ್ವ ಬಿಜೆಪಿಯಲ್ಲೇ ಅಂತ್ಯವಾಗಲಿದೆ ಎಂದು ಎಸ್. ಆರ್. ವಿಶ್ವನಾಥ್ ಏಕವಚನದಲ್ಲಿ ವಾಗ್ಥಳಿ ನಡೆಸಿದರು.
ದೊಡ್ಡಬಳ್ಳಾಪುರ ನಗರದ ದತ್ತಾತ್ರೇಯ ಕಲ್ಯಾಣ ಮಂಟಪದಲ್ಲಿ ವಿಶ್ವವಾಣಿ ಫೌಂಡೇಶನ್ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಕಾನ್ಸಟ್ರೇಟರ್ ಮತ್ತು ಆಶಾ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಣೆ ಮಾಡಿದ ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಅವರು, ಕೊರೊನಾ ಮೊದಲನೆ ಅಲೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಕೊರೊನಾ ಸೈನಿಕರಾಗಿ ಕೆಲಸ ನಿರ್ವಹಣೆ ಮಾಡಿದ ವೈದ್ಯರು, ನರ್ಸ್ಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗಳ ನಿರಂತರ ಪರಿಶ್ರಮ ಹಾಗೂ ಹೋರಾಟದಿಂದ ಕರೊನಾ ಗೆಲ್ಲಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಆರೋಪ ಮಾಡಿದ ಹೆಚ್. ವಿಶ್ವನಾಥ್ಗೆ ಎದುರೇಟು ನೀಡಿದರು. ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಅವರು, ಅವನು ಅರೆ ಹುಚ್ಚ ಅಲ್ಲ. ಪೂರ್ಣಪ್ರಮಾಣದ ಹುಚ್ಚ. ಅವರ ಪ್ರತಿಕ್ರಿಯೆಗಳಿಗೆ ನಾನು ಮಾತನಾಡುವುದಿಲ್ಲ ಅವರನ್ನು ಮಾತನಾಡಿಸಿದರೆ ಹುಚ್ಚು ಹುಚ್ಚನಾಗಿ ಮಾತನಾಡುತ್ತಾನೆ ಎಂದರು.
2008ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಲೂ ನಾನು ಮಂತ್ರಿ ಮಾಡಿ ಎಂದು ಕೇಳಲಿಲ್ಲ. ಅಧಿಕಾರಿಕ್ಕಾಗಿ ನಾನು ಪಕ್ಷದಲ್ಲಿ ಕೆಲಸ ಮಾಡುತ್ತಿಲ್ಲ. ಆದರೆ ಹೆಚ್. ವಿಶ್ವನಾಥಗೆ ಅಧಿಕಾರ ಬೇಕು. ಹೀಗಾಗಿ ಮಾನಸಿಕವಾಗಿ ಜರ್ಜರಿತನಾಗಿದ್ದಾನೆ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.
ಫೆರಿಫೇರಲ್ ರಿಂಗ್ ರೋಡ್ ಕಾಮಾಗಾರಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಫೆರಿಫೆರಲ್ ರಿಂಗ್ ರೋಡ್ (PRR) ರಸ್ತೆಯ 365 ಎಕರೆ ಕಾಮಗಾರಿಯಲ್ಲಿ ನಾವು ಇನ್ನೂ ಒಂದು ಎಕರೆಯಷ್ಟು ಕೆಲಸ ಮಾಡಿಲ್ಲ. ಆಧಾರ ರಹಿತ ಆರೋಪ ಮಾಡುವುದನ್ನು ಕಲಿತಿದ್ದಾರೆ. ಬಿಡಿಎಯಲ್ಲಿ ಲೂಟಿ ಮಾಡಿದವರನ್ನು ಜೈಲಿಗೆ ಕಳುಹಿಸಿದ್ದೇನೆ.
ಅವರಿಗೆ ಇನ್ನೂ ಜಾಮೀನು ದೊರೆತಿಲ್ಲ. ಬಿಡಿಎಯನ್ನು ಸ್ವಚ್ಚ ಮಾಡುವ ಕೆಲಸ ಮಾಡಿದ್ದೇನೆ. ಯಾವುದೇ ಸಾಲ ಪಡೆಯದೆ ಮೊದಲ ಬಾರಿಗೆ 2,800 ಕೋಟಿ ರೂ. ಬಜೆಟ್ ಮಾಡಿದ್ದೇನೆ. ಆರೇಳು ತಿಂಗಳಲ್ಲಿ ಬಿಡಿಎ ಆರ್ಥಿಕ ಸ್ಥಿತಿ ಸುಧಾರಿಸಲು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಹಿರಿಯರಾಗಿ ಅವರು ದಾಖಲೆ ಸಮೇತ ಮಾತನಾಡಬೇಕು. ನನ್ನ ವಿರುದ್ಧ ವೈಯಕ್ತಿಕವಾಗಿ ಕೆಟ್ಟ ಪದ ಬಳಸಿದ್ದರಿಂದ ನಾನು ಮಾತನಾಡಲೇಬೇಕಾಯಿತು. ನಾನು ಆಗಿದ್ದರಿಂದ ಸಹಿಸಿಕೊಂಡಿದ್ದೇನೆ. ಇಷ್ಟೆಲ್ಲಾ ಆದರೂ ಹುಚ್ಚು ಬಿಟ್ಟಿಲ್ಲ. ಅವರ ರಾಜಕೀಯ ಅಸ್ತಿತ್ವ ಬಿಜೆಪಿಯಲ್ಲೇ ಕೊನೆ. ವರಿಷ್ಠರು ಸೂಚನೆ ನೀಡಿದರೂ ಮತ್ತೆ ಸುದ್ದಿಗೋಷ್ಠಿ ಮಾಡಿ ತಮ್ಮ ಚಾಳಿ ಮುಂದುವರಿಸಿದ್ದಾರೆ.
ನಾಳೆ ಅಥವಾ ನಾಡಿದ್ದು ಅವರ ಮನೆಯವರೇ ನಿಮಾನ್ಸ್ ಸೇರಿಸುತ್ತಾರೆ ಎಂದು ಎಂಎಲ್ಸಿ ಹೆಚ್. ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.