ದೊಡ್ಡಬಳ್ಳಾಪುರ: ಬಯಲು ಸೀಮೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ನೀರಿಗಾಗಿ ಸಾವಿರ ಅಡಿ ಕೊಳವೆ ಬಾವಿ ಕೊರೆಯಬೇಕು. ಜತೆಗೆ ಬೇಸಿಗೆ ಸಮಯದಲ್ಲಿ ಬೋರ್ವೇಲ್ನಲ್ಲಿ ನೀರು ಸಿಗದೇ ಬೆಳೆ ಒಣಗುವುದು, ದಿನನಿತ್ಯ ಕಾರ್ಯಕ್ಕೆ ನೀರಿಗೋಸ್ಕರ ಪರದಾಡುವುದು ಸಾಮಾನ್ಯ ದೃಶ್ಯವಾಗಿದೆ.
ಆದರೆ ಇಲ್ಲೊಂದು ಮನೆಯಲ್ಲಿ ಯಾವುದೇ ಬೋರ್ವೇಲ್ ಕೊರೆಸಿಲ್ಲ. ಆದರೂ ಅಂತರ್ಜಲ ಉಕ್ಕಿದೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೇಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಎಳ್ಳುಪುರ ಕ್ರಾಸ್ನ ಬಾಬು ಎಂಬುವವರ ಮನೆಯಲ್ಲಿ ಗಂಗೆ ಉಕ್ಕಿದ್ದಾಳೆ. ಮನೆಯಲ್ಲಿ ಯಾವುದೇ ಬೋರ್ವೆಲ್ ಕೊರೆಸಿಲ್ಲ. ಹತ್ತಿರ ಯಾವುದೇ ಕರೆ-ಕುಂಟೆ ಸಹ ಇಲ್ಲ. ಸಾವಿರಾರು ಅಡಿಯಲ್ಲಿ ಸಿಗುವ ನೀರು ಬಾಬು ಅವರ ಮನೆಯಲ್ಲಿ ಉಕ್ಕುತ್ತಿರುವುದು ಅನೇಕ ಆಶ್ಚರ್ಯಗಳಿಗೆ ಕಾರಣವಾಗಿದೆ.
ಏನಿದು ಪವಾಡ!?
ಎರಡು ವರ್ಷದ ಹಿಂದೆ ನೀರು ಉಕ್ಕುತ್ತಿರುವ ಜಾಗದಲ್ಲಿ ಮನೆ ಕಟ್ಟಲು ಬಾಬು ಮುಂದಾಗಿದ್ದರು. ನಿವಾಸ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುವ ಸಮಯದಲ್ಲಿ ಬೃಹತ್ ಬಂಡೆ ಅಡ್ಡ ಬಂದಿದೆ. ಕೆಲಸಕ್ಕೆ ಆಡ್ಡಿಯಾಗುತ್ತೆ ಎಂಬ ಕಾರಣದಿಂದ ಅದನ್ನ ಸ್ಫೋಟಿಸಿದರು. ಅದು ಸ್ಪೋಟಗೊಂಡ ದಿನದಿಂದ ಅಂತರ್ಜಲದಿಂದ ನೀರು ಉಕ್ಕುತ್ತಿದೆ. ಮನೆ ಕಟ್ಟಲು ಇದೇ ನೀರು ಬಳಸಲಾಗಿದೆ.
ಎರಡು ವರ್ಷದಿಂದ ನೀರು ಉಕ್ಕುತ್ತಿರುವುದು ಅಚ್ಚರಿಯ ಜೊತೆಗೆ ಖುಷಿ ವಿಚಾರವಾಗಿದೆ. ತಮ್ಮ ಕಟ್ಟಡದಲ್ಲಿರುವ 7 ಮನೆಗಳಿಗೆ ಇದೇ ನೀರು ಬಳಕೆಯಲ್ಲಿದೆ. ನೀರಿನ ಪರೀಕ್ಷೆ ಮಾಡಿಸಿದ್ದಾಗ ಪಿಎಚ್ ಮಟ್ಟ ಸಹ ಉತ್ತಮವಾಗಿದೆ ಎಂದು ತಿಳಿದು ಬಂದಿದೆ. ಮಳೆಗಾಲ ಬಂದಾಗ ಅಂತರ್ಜಲದಿಂದ ಉಕ್ಕುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಕೆಳ ಮಹಡಿಯಲ್ಲಿ ಬಟ್ಟೆ ಮಳಿಗೆ ಇಟ್ಟುಕೊಂಡಿರುವ ಬಾಬುರವರಿಗೆ ನೀರು ಹೊರಹಾಕುವುದು ಒಂದು ದೊಡ್ಡ ಸಮಸ್ಯೆಯಾಗಿದೆ.
ಕೆಳ ಮಹಡಿಯಲ್ಲಿ ಸಂಗ್ರಹವಾಗುವ ನೀರು ಹೊರಹಾಕಲು ಕಷ್ಟಪಡಬೇಕು. ಇದಕ್ಕಾಗಿ ತಿಂಗಳಿಗೆ 5 ಸಾವಿರ ವಿದ್ಯುತ್ ಖರ್ಚಾಗುತ್ತದೆಯಂತೆ. ಆದರೆ ನೀರಿಗಾಗಿ ಪಂಚಾಯತ್ನಿಂದ ನಲ್ಲಿ ಸಂಪರ್ಕ ಪಡೆದುಕೊಳ್ಳಲು ಪರದಾಡಬೇಕಾದ ಸನ್ನಿವೇಶದ ಸಮಯದಲ್ಲಿ ಬಾಬು ಅವರ ಮನೆಯಲ್ಲಿ ಗಂಗೆ ಉಕ್ಕುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ.