ಆನೇಕಲ್: ಡಾ. ಬಿ.ಆರ್. ಅಂಬೇಡ್ಕರ್ ಸಮಾಜದ ಕಟ್ಟ ಕಡೆಯ, ಎಲ್ಲ ಜಾತಿ, ವರ್ಗದ ಶೋಷಿತರಿಗೆ ರಾಜಕೀಯ, ಸಾಮಾಜಿಕ ಸ್ಥಾನಮಾನವನ್ನು ಸಾಂವಿಧಾನಿಕ ನೆಲೆಯಲ್ಲಿ ಕಲ್ಪಿಸಿಕೊಟ್ಟ ಮಾಹಾನ್ ಮಾನವತಾವಾದಿ. ಜಗತ್ತಿನ ಸಂವಿಧಾನಗಳನ್ನ ಒಮ್ಮೆ ತಿರಿವು ಹಾಕಿದರೆ ಅತೀ ಶ್ರೇಷ್ಠ ಸಂವಿಧಾನ ಎಂತಲೇ ಕರೆಸಿಕೊಳ್ಳುವ ಏಕೈಕ ಸಂವಿಧಾನ ಕೊಟ್ಟ ಮಹಾನ್ ಪುರುಷ ಎಂದು ಆನೇಕಲ್ ಶಾಸಕ ಬಿ.ಶಿವಣ್ಣ ಹೇಳಿದರು.
ಆನೇಕಲ್ ತಾಲೂಕಿನ ಕರಕಲಘಟ್ಟದಲ್ಲಿ ಕರುನಾಡ ಪ್ರಜಾ ಸೇನೆ, ಡಾ. ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಏರ್ಪಡಿಸಿದ್ದ 128ನೇ ಜನ್ಮ ದಿನಾಚರಣೆಯ ವೇದಿಕೆಯಲ್ಲಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಅಂಬೇಡ್ಕರ್ ವಿಚಾರಧಾರೆಯನ್ನ ಸಣ್ಣ ಪುಸ್ತಕಗಳ ಮೂಲಕ ಸರಳವಾಗಿ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಳ್ಳಿ-ಹಳ್ಳಿಗಳಲ್ಲಿ ಅಂಬೇಡ್ಕರ್ ಸಿದ್ಧಾಂತಗಳನ್ನು ಬಿತ್ತುವ ಅಗತ್ಯವಿದೆ ಎಂದರು.
ಮಾಧ್ಯಮದವರು ಎಕ್ಸಿಟ್ ಪೋಲ್ ಫಲಿತಾಂಶದ ಬಗ್ಗೆ ಪ್ರಶ್ನಿಸಿದಾಗ, ಫಲಿತಾಂಶ ಮೋದಿಯವರಿಗೆ ನಿರಾಶಾದಾಯಕವಾಗಿದೆ. ಮೋದಿಯವರ ಸುಳ್ಳು ನಡೆಯುವುದಿಲ್ಲ, ಮುಂದೆ ಯುಪಿಎ ಸರ್ಕಾರ ಕೇಂದ್ರದಲ್ಲಿ ಖಚಿತ ಎಂದರು.