ದೊಡ್ಡಬಳ್ಳಾಪುರ: ಹಣ ಸುಲಿಗೆ, ಜೀವ ಬೆದರಿಕೆ, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬಂಧಿತನಾಗಿರುವ ಬಾಂಬೆ ಸಲೀಂ ಎಂಬಾತನನ್ನು ಹೆಚ್ಚಿನ ವಿಚಾರಣೆಗಾಗಿ ದೊಡ್ಡಬಳ್ಳಾಪುರ ಪೊಲೀಸರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಟಿ.ರಂಗಪ್ಪ ತಿಳಿಸಿದ್ದಾರೆ.
ಬಾಂಬೆ ಸಲೀಂ ಮೇಲೆ ದೊಡ್ಡಬಳ್ಳಾಪುರ ಉಪವಿಭಾಗದ ವಿವಿಧ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಬಾಂಬೆ ಸಲೀಂನಿಂದ ವಂಚನೆ, ಹಣ ಸುಲಿಗೆ, ಜೀವ ಬೆದರಿಕೆಗೆ ಒಳಗಾದ ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದರೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಾಂಬೆ ಸಲಿಂ ಪ್ರಕರಣವೊಂದರ ಹಿನ್ನೆಲೆ ಜೈಲಿನಲ್ಲಿದ್ದಾಗ ಆತನ ಪತ್ನಿ ಸುಖೀನಾ ಪಿಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಯುವಕ ಪೃಥ್ವಿರಾಜ್ ಜೊತೆ ಚಾಂಟಿಗ್ ಮಾಡುತ್ತಿದ್ದಳು. ಜೈಲಿನಿಂದ ಹೊರಬಂದ ನಂತರ ಪತ್ನಿಯ ಚಾಟಿಂಗ್ ವಿಷಯ ಬಾಂಬೆ ಸಲಿಂಗೆ ತಿಳಿದಿತ್ತು. ಇದರಿಂದ ರೊಚ್ಚಿಗೆದ್ದ ಬಾಂಬೆ ಸಲಿಂ ಆತನನ್ನು ಮುಗಿಸಲು ಹೊಂಚು ಹಾಕಿದ್ದನು.
ಅದರಂತೆ ಪತ್ನಿ ಮೂಲಕ ಪೃಥ್ವಿರಾಜನನ್ನು ಚಿಕ್ಕಬಳ್ಳಾಪುರಕ್ಕೆ ಕರೆಸಿಕೊಂಡ ಬಾಂಬೆ ಸಲಿಂ, ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿಯ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದನು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಸಲಿಂ ಇದೀಗ ಬಾಗೇಪಲ್ಲಿ ಪೊಲೀಸರ ವಶದಲ್ಲಿದ್ದನು.
ಇನ್ನು ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಜೀವ ಬೆದರಿಕೆ, ಸುಲಿಗೆ ಸಂಬಂಧಿಸಿದಂತೆ ಬಾಂಬೆ ಸಲಿಂ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆ ದೊಡ್ಡಬಳ್ಳಾಪುರದ ಉಪ ವಿಭಾಗದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈತನ ವಿರುದ್ಧ ದೂರಗಳಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ರಂಗಪ್ಪ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.