ದೇವನಹಳ್ಳಿ/ಬೆಂಗಳೂರು : ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದಲ್ಲಿ ನಡೆದಿದೆ. ವಿಜಯಪುರ ಪಟ್ಟಣದ ನಿವಾಸಿ ರಮೇಶ್ (28) ಹಾಗು ಸಹನಾ (26) ಸಾವಿಗೆ ಶರಣಾದವರು.
ಪ್ರೀತಿಸಿ ಮನೆಯವರ ವಿರೋಧದ ನಡುವೆ ಇವರು ಮದುವೆಯಾಗಿದ್ದರು. ವಿವಾಹವಾಗಿ ಪ್ರತ್ಯೇಕ ಮನೆ ಮಾಡಿಕೊಂಡಿದ್ದರು. ರಮೇಶ್ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ದಿನದ ಹಿಂದೆ ಬಿಜ್ಜವಾರ ಗ್ರಾಮದ ಸಂಬಂಧಿಕರ ಮನೆಗೆ ಇಬ್ಬರೂ ಬಂದಿದ್ದರು. ರಾತ್ರಿ ಮನೆಯಿಂದ ಹೊರಟವರು ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರ ಸಹಾಯದಿಂದ ಪೊಲೀಸರು ನೀರಿನಲ್ಲಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ದೇವನಹಳ್ಳಿ ತಹಶೀಲ್ದಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮಾಡೆಲ್!
ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ (ಪ್ರತ್ಯೇಕ ಪ್ರಕರಣ) : ಇನ್ನೊಂದೆಡೆ, ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ನೇಪಾಳ ಮೂಲದ ತಿಲಕ್ ಚಂದ್ರನನ್ನು ಹತ್ಯೆ ಮಾಡಿ ಸಿದ್ದರಾಜು ಎಂಬಾತ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಏಳು ವರ್ಷಗಳಿಂದ ತಿಲಕ್ ಚಂದ್ರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅನಾಥನಾಗಿದ್ದ ಈತ ಫೋನ್ ಬಳಸುತ್ತಿರಲಿಲ್ಲ. ಸಿದ್ದರಾಜು ಮಂಡ್ಯ ಮೂಲದವನಾಗಿದ್ದು ಈತ ಕೂಡ ಎಂಟು ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದ. ಇಬ್ಬರು ಸ್ನೇಹಿತರು ಸೇರಿ ಒಟ್ಟು ಆರು ಜನ ಒಂದೇ ರೂಮಿನಲ್ಲಿ ವಾಸ್ತವ್ಯ ಹೂಡಿದ್ದರು. ಕೆಲಸಗಾರರಿಗೆ ಅನುಕೂಲವಾಗಲೆಂದು ಮಾಲೀಕರು ಬೈಕ್ ನೀಡಿದ್ದರು. ಒಂದೇ ಬೈಕಿನಲ್ಲಿ ಇಬ್ಬರು ಪ್ರತಿನಿತ್ಯ ಕೆಲಸ ಬರುತ್ತಿದ್ದರು.
ಇದನ್ನೂ ಓದಿ : Bengaluru crime : ಬೆಂಗಳೂರಿನಲ್ಲಿ ಪತ್ನಿ ಕೊಂದು ಅತ್ತೆಗೆ ಕರೆ ಮಾಡಿದ ಅಳಿಯ
ನಿನ್ನೆ ಎಂದಿನಂತೆ ಕೆಲಸಕ್ಕೆ ಹೋಗಿ ಬಂದಿದ್ದರು. ಸಂಜೆ ಹೊಸಕೆರೆಹಳ್ಳಿಯ ಬಾರ್ಗೆ ಹೋಗಿ ಮದ್ಯ ಸೇವಿಸಿ ಮನೆಗೆ ಬಂದಿದ್ದರು. ಬೈಕ್ ಕೀ ಕೊಡುವಂತೆ ಸಿದ್ದರಾಜು ಕೇಳಿದ್ದಾನೆ. ಆದರೆ, ತಿಲಕ್ ಕೀ ಕೊಡಲು ನಿರಾಕರಿಸಿದ್ದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಕೋಪದಲ್ಲಿ ಮನೆಯಲ್ಲಿದ್ದ ಚಾಕುವಿನಿಂದ ತಿಲಕ್ಗೆ ಚುಚ್ಚಿ ಹತ್ಯೆ ಮಾಡಿ ಪೊಲೀಸರ ಮುಂದೆ ಆರೋಪಿ ಶರಣಾಗಿದ್ದಾನೆ. ಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಗಂಡನ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ : ಪತ್ನಿಯ ಕಳ್ಳಾಟ ಬಯಲಿಗೆಳೆದ ಪೊಲೀಸರು!