ಬೆಂಗಳೂರು: ಯಲಹಂಕ ವಾರ್ಡ್ ನಂ.3ರ ಕಾರ್ಪೋರೇಟರ್ ಎಂ.ನೇತ್ರಪಲ್ಲವಿ ಅಟ್ಟೂರಿನ ಮನೆ ಮನೆಗಳಿಗೆ ತೆರಳಿ ಬಡವರಿಗೆ ದಿನಸಿ ಪದಾರ್ಥಗಳನ್ನ ನೀಡಿ,ಕೊರೊನಾ ಸೋಂಕು ಹರಡುವುದನ್ನ ತಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಇಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮಾರ್ಗದರ್ಶನದಂತೆ ನಮ್ಮ ವಾರ್ಡ್ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ನಮ್ಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 21 ದಿನಗಳ ಲಾಕ್ಡೌನ್ ಘೋಷಿಸಿದ್ದಾರೆ. ಇದನ್ನು ಪ್ರತಿಯೊಬ್ಬರು ಪಾಲಿಸಬೇಕು. ಯಾರೊಬ್ಬರು ಮನೆಯಿಂದ ಆಚೆಗೆ ಬರಬಾರದು. ಅನಿವಾರ್ಯವಾಗಿ ಹೊರಗೆ ಬಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇನ್ನು, ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿದ್ದಾರೆ. ಅವರಿಗೆ ನೆರವಾಗುವ ನಿಟ್ಟಿನಲ್ಲಿ ನಮ್ಮ ತಂದೆಯವರಾದ ಎ.ಸಿ.ಮುನಿಕೃಷ್ಣಪ್ಪನವರ ಸ್ವಂತ ಖರ್ಚಿನಲ್ಲಿ ಇಂದು ದಿನಸಿ ಸಾಮಗ್ರಿಗಳನ್ನು ವಿತರಿಸಿದ್ದಾರೆ ಎಂದರು.