ಆನೇಕಲ್: ಕಳೆದ ಕೆಲ ದಿನಗಳ ಹಿಂದೆ ಮನೆಯಲ್ಲಿ ಏನೂ ಸಿಗಲಿಲ್ಲ ಎಂದು ಇಡೀ ಮನೆಗೆ ಬೆಂಕಿ ಹಾಕಿ ಹೋಗಿದ್ದ ಚಾಲಾಕಿ ಕಳ್ಳ ಇನ್ನೂ ಪತ್ತೆಯಾಗಿಲ್ಲ. ಇತ್ತ ಸಿಸಿ ಕ್ಯಾಮೆರಾದಲ್ಲಿ ಎರಡು ಬಾರಿ ಕಳ್ಳನ ಚಹರೆ ಕಂಡಿದ್ದರಿಂದ ಆನೇಕಲ್ ಪೊಲೀಸರು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮನೆ ಮುಂದೆ ರಂಗೋಲೆ ಬಿಡಿಸುತ್ತಿದ್ದ ಮಹಿಳೆಯ ಕತ್ತಿಗೆ ಕೈ ಹಾಕಿ ಸರ ಕದ್ದ ಘಟನೆ ಬೇರೆ ನಡೆದಿದೆ.
ಆದರೆ, ಸರ ಕದ್ದು ಕಳ್ಳರು ಬಳಿಕ ಸರವನ್ನು ವಾಪಸ್ ಕೊಟ್ಟಿದ್ದಾರೆ. ಕಾರಣ ಅದು ರೋಲ್ಡ್ ಗೋಲ್ಡ್ ಚೈನ್. ಅಷ್ಟೇ ಅಲ್ಲ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ರೋಲ್ ಗೋಲ್ಡ್ ಚೈನ್ ಹಾಕಿಕೊಂಡು ಬಿಲ್ಡಪ್ ಕೊಡ್ತೀಯಾ ಅಂತಾ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಇನ್ನು, ಹಲ್ಲೆಗೊಳಗಾಗಿದ್ದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಈ ಬಗ್ಗೆ ಮಹಿಳೆಯರಿಗೆ ಪೊಲೀಸರು ಜಾಗೃತಿ ಮೂಡಿಸಿದ್ರು. ಸರಗಳ್ಳರ ಹಾವಳಿ ಮಾತ್ರ ನಿಲ್ಲುತ್ತಿಲ್ಲ. ಗೃಹಿಣಿಯರು, ವಯಸ್ಸಾದ ಅಜ್ಜಿಯರನ್ನೇ ಟಾರ್ಗೆಟ್ ಮಾಡುವ ಖತರ್ನಾಕ್ ಕಳ್ಳರು, ಹೆಚ್ಚಾಗಿ ಮಾಂಗಲ್ಯ ಸರಗಳನ್ನೇ ಎಗರಿಸುತ್ತಿದ್ದಾರೆ. ವಾಕಿಂಗ್ ಹೋಗುವ ವೇಳೆ, ವಿಳಾಸ ಕೇಳುವ ನೆಪದಲ್ಲಿ, ಗಿಡಕ್ಕೆ ನೀರು ಹಾಕುವ ವೇಳೆ ಬರುವ ಈ ಕಳ್ಳರು ತಮ್ಮ ಚಾಲಾಕಿತನ ಪ್ರದರ್ಶಿಸುತ್ತಾರೆ.