ಬೆಂಗಳೂರು : ಅಗತ್ಯ ದಾಖಲೆ ಇಲ್ಲದೆ ಕಾರ್ಗೋ ವಿಮಾನದ ಮೂಲಕ ಸಾಗಾಟ ಮಾಡಲಾಗುತ್ತಿದ್ದ 460 ಬ್ಯಾಗ್‍ಗಳಲ್ಲಿದ್ದ 11,500 ಕೆ.ಜಿ ತೂಕದ ಅಡಕೆಯನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಾಗೃತಿ ವಿಭಾಗದ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಅಡಕೆ ಸಾಗಾಣಿಕೆ ಸಂಬಂಧಿಸಿದಂತೆ ಯಾವುದೇ ಅಗತ್ಯ ದಾಖಲೆಗಳು ಇಲ್ಲದಿರುವುದು ಸರಕುಗಳ ಮೂಲಸ್ಥಳದ ಬಗ್ಗೆ ಸಂಶಯ ಮೂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಅಡಕೆಯು ಈಶಾನ್ಯ ರಾಜ್ಯಗಳಾದ ಅಸ್ಸೋಂ ಮತ್ತು ಮಣಿಪುರ ಕಡೆಯಿಂದ ಮಧ್ಯಪ್ರದೇಶ ಹಾಗೂ ಬೆಂಗಳೂರಿನ ಸ್ಥಳೀಯ ಅನೋಂದಾಯಿತ ವರ್ತಕರಿಗೆ ಸರಬರಾಜಾಗುತ್ತಿತ್ತು ಎಂಬುದು ಗೊತ್ತಾಗಿದೆ. ಏರ್ವೇ ಬಿಲ್ಗಳಲ್ಲಿ ಕೇವಲ ವ್ಯಕ್ತಿಗಳ ಹೆಸರುಗಳು ಮತ್ತು ಮೊಬೈಲ್ ನಂಬರ್ಗಳನ್ನು ಉಪಯೋಗಿಸಿಕೊಂಡು ಸರಕು ರವಾನಿಸಲಾಗುತ್ತಿತ್ತು. ಅಸ್ಸೋಂ, ಮಣಿಪುರ ಮತ್ತು ಮಧ್ಯಪ್ರದೇಶದ ಜಿ.ಎಸ್.ಟಿ ಅಧಿಕಾರಿಗಳ ಜಂಟಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.
ಜೊತೆಗೆ, ಅಡಕೆಯು ಮ್ಯಾನ್ಮಾರ್ನಿಂದಲೂ ಕಳ್ಳ ಸಾಗಾಣಿಕೆ ಆಗುತ್ತಿರುವ ಅನುಮಾನವಿದೆ. ಕಡಿಮೆ ಗುಣಮಟ್ಟ ಮತ್ತು ಅಲ್ಪ ಮೌಲ್ಯದ ಅಡಕೆಯನ್ನು ಸ್ಥಳೀಯವಾಗಿ ಲಭ್ಯವಾಗುವ ಅಡಿಕೆಯೊಂದಿಗೆ ಬೆರೆಸುವ ಉದ್ದೇಶದಿಂದ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಇದಕ್ಕೆ ಪ್ರತಿ ಕೆ.ಜಿಗೆ ಸುಮಾರು 250 ರಿಂದ 300 ರೂ. ಇದೆ. ಆದರೆ ಈ ಅಡಕೆಯನ್ನು ಮಾರುಕಟ್ಟೆಯಲ್ಲಿ ಕೆ.ಜಿಗೆ 25 ರಿಂದ 30 ರೂ. ಕಡಿಮೆ ಬೆಲೆಗೆ ಮಾರಾಟಕ್ಕೆ ಮುಂದಾಗಿರುವುದು ಗೊತ್ತಾಗಿದೆ. ಈ ಆಡಕೆ ವಾರಸುದಾರರ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಚಾಕುವಿನ ಹಿಡಿಕೆಯೊಳಗೆ ಅಡಗಿಸಿಟ್ಟು ಚಿನ್ನ ಸಾಗಣೆ, ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ