ಬೆಂಗಳೂರು: ರಾಜ್ಯದಲ್ಲಿ ಸರಿಯಾಗಿ ಮಳೆ ಇಲ್ಲದ ಕಾರಣ ರೈತರು ಸಂಕಷ್ಟದಲ್ಲಿದ್ದು, ವ್ಯವಸಾಯಕ್ಕೆ ಮತ್ತು ದನ ಕರುಗಳಿಗೆ ಹೆಚ್ಚಾಗಿ ಕಾವೇರಿ ನೀರನ್ನು ಒದಗಿಸುವ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ರಾಜ್ಯದಲ್ಲಿಯೇ ಎರಡನೇ ಅತೀ ಸುಸಜ್ಜಿತ ಗ್ರಾಮಪಂಚಾಯತ್ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೆನ್ನಾಗರ ಗ್ರಾಮ ಪಂಚಾಯತ್ ಕಟ್ಟಡವನ್ನು ಸಂಸದ ಡಿ ಕೆ ಸುರೇಶ್, ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಕಾವೇರಿ ನೀರು ಮಂಡ್ಯ ಜನಕ್ಕಷ್ಟೇ ಅಲ್ಲ ಇಡೀ ಕರ್ನಾಟಕದ ರೈತರಿಗೆ ಬೇಕಾಗಿದೆ. ಕೇಂದ್ರ ಪಾಧಿಕಾರದ ಟ್ರಿಬ್ಯುನಲ್ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ಸಂಸತ್ ಸದಸ್ಯರು ಸಹ ಲೋಕಸಭೆಯಲ್ಲಿ ಮನವಿ ಮಾಡಿದ್ದಾರೆ ಎಂದರು. ಸಂಸದರಿಗೆ ಎಂಎಲ್ಸಿ ನಾರಾಯಣಸ್ವಾಮಿ ಸಾಥ್ ನೀಡಿದ್ರು.
ಬೆಂಗಳೂರು ದಕ್ಷಿಣದ ಹೆನ್ನಾಗರ ಗ್ರಾಮ ಪಂಚಾಯತ್ ಕಟ್ಟಡ ಉಪ ವಿಧಾನಸೌಧದ ರೀತಿ ಜನರಿಗೆ ಸಿಗುವಂತಾಗಿದ್ದು, ಸಾಮಾನ್ಯ ಸೇವಾ ಕೇಂದ್ರದ 350ಸೇವೆಗಳು ಜನರಿಗೆ ತಲುಪಿಸುವ ಅವಕಾಶ ಮಾಡಲಾಗಿದೆ. ದಾಖಲೆಗಳ ನಿರ್ವಹಣೆ, ದಾಖಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಸೈನಿಕರ ಸಾಧನೆ ನೆನಪಿನಾರ್ಥ ಅಮರ್ ಜವಾನ್ ಸ್ಮಾರಕ ಹಾಗೂ ಪಾರ್ಕ್ ನಿರ್ಮಿಸಲಾಗಿದ್ದು, ಜನರಿಗಾಗಿ ಮುಕ್ತವಾಗಿದೆ.