ದೇವನಹಳ್ಳಿ: ರಾಜ್ಯದಲ್ಲಿ ಇಂದಿನಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಮತ್ತು ಜಿಲ್ಲೆಗಳಿಗೆ ಹೊರಡುವ ಬಸ್ಗಳು ರಾತ್ರಿ 10 ಗಂಟೆಯೊಳಗೆ ಹೊರಟು ಬೆಳಗ್ಗೆ 6 ಗಂಟೆಯ ನಂತರ ನಿಗದಿತ ಸ್ಥಳದ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ರಾತ್ರಿ 10 ಗಂಟೆಯೊಳಗೆ ಬಸ್ ನಿಲ್ದಾಣಕ್ಕೆ ಬನ್ನಿ :
ಬೆಳಗಾವಿಗೆ ಪ್ರಯಾಣಿಸಲು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂದಿನಿಂದ 9 ದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದೆ. ಹೊರ ರಾಜ್ಯ ಮತ್ತು ವಿವಿಧ ಜಿಲ್ಲೆಗಳಿಗೆ ಸಂಚರಿಸುವ ಬಸ್ಗಳು ರಾತ್ರಿ 10 ಗಂಟೆಯೊಳಗೆ ಹೊರಡುವ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ರಾತ್ರಿ 10 ಗಂಟೆಯೊಳಗೆ ಬಸ್ ನಿಲ್ದಾಣಕ್ಕೆ ಬರುವಂತೆ ಮನವಿ ಮಾಡಲಾಗಿದೆ. ಇದರಿಂದ ಒಂದೆರಡು ದಿನ ಪ್ರಯಾಣಿಕರಿಗೆ ತೊಂದರೆಯಾಗಬಹುದು ಎಂದರು.
ಓದಿ: ನ್ಯೂ ಇಯರ್ ಪಾರ್ಟಿ ಇರಲ್ಲ: ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ
ನೈಟ್ ಕರ್ಫ್ಯೂ ಮಾರ್ಗಸೂಚಿ ಪ್ರಕಟವಾದ ನಂತರ ಸ್ವಷ್ಟವಾದ ಚಿತ್ರಣ ಸಿಗಲಿದೆ. ಅಲ್ಲಿಯವರೆ ಪ್ರಯಾಣಿಕರಿಗೆ ಗೊಂದಲ ಇರಬಹುದು. ನೈಟ್ ಕರ್ಫ್ಯೂ ಸಮಯದಲ್ಲಿ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ಇರುವುದಿಲ್ಲ, ವಾಹನಗಳು ಸಂಚಾರಿಸಲಿವೆ. ನಗರ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ ಬಂದ್ ಆಗಬಹುದು ಎಂದು ಹೇಳಿದರು.