ದೇವನಹಳ್ಳಿ : ಅಳಿವಂಚಿನಲ್ಲಿರುವ ಕಾಡು ಪ್ರಾಣಿಗಳನ್ನು ಎರಡು ಟ್ರಾಲಿ ಬ್ಯಾಗ್ಗಳಲ್ಲಿ ಕಳ್ಳ ಸಾಗಣೆ ಮಾಡುತ್ತಿರುವುದನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪ್ರಯಾಣಿಕನನ್ನು ಬಂಧಿಸಿರುವ ಅಧಿಕಾರಿಗಳು, 234 ಕಾಡು ಪ್ರಾಣಿಗಳನ್ನು ಸಂರಕ್ಷಣೆ ಮಾಡಿದ್ದಾರೆ.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 21ರ ರಾತ್ರಿ ಬ್ಯಾಂಕಾಕ್ನಿಂದ ಬಂದ ವಿಮಾನ ಸಂಖ್ಯೆ ಎಫ್ ಡಿ-137ರಲ್ಲಿ ಪ್ರಯಾಣಿಕ ಬಂದಿಳಿದಿದ್ದಾನೆ. ಪ್ರಯಾಣಿಕ ಗ್ರೀನ್ ಚಾನಲ್ ದಾಟಿ ಏರ್ಪೋರ್ಟ್ನ ಆಗಮನ ಪ್ರದೇಶದ ನಿರ್ಗಮನ ದ್ವಾರದ ಕಡೆಗೆ ಬರುತ್ತಿದ್ದ ಸಮಯದಲ್ಲಿ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಡೆದು ತಪಾಸಣೆ ನಡೆಸಿದ್ದಾರೆ. ಆಗ ಎರಡು ಟ್ರಾಲಿ ಬ್ಯಾಗ್ಗಳಲ್ಲಿ ಕಾಡು ಪ್ರಾಣಿಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ಅದರಲ್ಲಿ ಒಂದು ಟ್ರಾಲಿ ಬ್ಯಾಗ್ಗೆ ಆತ ಅನುಮತಿಯನ್ನೇ ಪಡೆದಿರಲಿಲ್ಲ ಎಂದು ಗೊತ್ತಾಗಿದೆ.
ಪ್ರಯಾಣಿಕನ ಟ್ರಾಲಿ ಬ್ಯಾಗ್ಗಳನ್ನು ತಪಾಸಣೆ ಮಾಡಿದಾಗ ಹೆಬ್ಬಾವು, ಊಸರವಳ್ಳಿ, ಇಗ್ವಾನಾ, ಆಮೆಗಳು, ಅಲಿಗೇಟರ್‌ಗಳು ಮತ್ತು ಒಂದು ಮರಿ ಕಾಂಗರೂ ಸೇರಿದಂತೆ ಒಟ್ಟು 234 ವನ್ಯಜೀವಿಗಳು ಪತ್ತೆಯಾಗಿದೆ ಎಂದು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಾಡು ಪ್ರಾಣಿ ಮತ್ತು ಸಸ್ಯಗಳ (CITES) ಅಂತಾರಾಷ್ಟ್ರೀಯ ವ್ಯಾಪಾರದ ಸಮಾವೇಶದ ಅನುಬಂಧಗಳಲ್ಲಿ ಹೇಳಲಾದ ಕೆಲವು ಅಪರೂಪದ ಪ್ರಾಣಿಗಳನ್ನು ಪಟ್ಟಿ ಮಾಡಲಾಗಿದೆ. ಕಸ್ಟಮ್ಸ್ ಆಕ್ಟ್, 1962 ರ ಸೆಕ್ಷನ್ 104 ರ ಪ್ರಕಾರ ಪ್ರಯಾಣಿಕನನ್ನು ಬಂಧಿಸಲಾಗಿದೆ ಮತ್ತು ರಕ್ಷಿಸಲಾದ ಕಾಡು ಪ್ರಾಣಿಗಳನ್ನು ಕಸ್ಟಮ್ಸ್ ಆಕ್ಟ್, 1962 ರ ಸೆಕ್ಷನ್ 110 ರ ಅಡಿ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂಬುದಾಗಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕನ ಗುದನಾಳದಲ್ಲಿತ್ತು 42 ಲಕ್ಷ ರೂ ಮೌಲ್ಯದ ಚಿನ್ನ! ಹೈದರಾಬಾದ್ ಏರ್ಪೋರ್ಟ್‌ನಲ್ಲಿ ಸೆರೆ
ನಟ್ ಬೋಲ್ಟ್ ಮಾದರಿಯಲ್ಲಿ ಚಿನ್ನ ಕಳ್ಳಸಾಗಣೆ: ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟ್ ಬೋಲ್ಟ್ ಮಾದರಿಯಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಆಗಸ್ಟ್ 18 ರಂದು ದುಬೈನಿಂದ ಎಮಿರೇಟ್ಸ್ ವಿಮಾನ ಸಂಖ್ಯೆ 568ರಲ್ಲಿ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ದುಬೈನಿಂದ ವಿಮಾನದಲ್ಲಿ ಬಂದಿಳಿದಿದ್ದ ಪ್ರಯಾಣಿಕನೋರ್ವ ಲಗೇಜ್ ಬ್ಯಾಗ್ನಲ್ಲಿ ಚಿನ್ನದ ನಟ್ ಬೋಲ್ಟ್ ಅಳವಡಿಸಿಕೊಂಡು ಕಳ್ಳಸಾಗಣೆ ಮಾಡುತ್ತಿದ್ದ. ಬ್ಯಾಗ್ ಚೆಕ್ ಮಾಡಿದಾಗ ಅಧಿಕಾರಿಗಳೇ ಕೆಲಕಾಲ ಆಶ್ಚರ್ಯಚಕಿತರಾಗಿದ್ದರು. ಬಳಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ಬಂಧಿಸಿ, 267 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದರು.