ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಒಟ್ಟು ಸಾವಿರದ ಆರುನೂರು ಕೋಟಿ ಮೌಲ್ಯದ ಸ್ವತ್ತನ್ನು ಖಾಸಗಿ ಸಂಸ್ಥೆಗಳು ಮಾರಾಟ ಮಾಡಲು ಯತ್ನಿಸುತ್ತಿವೆ ಎಂದು ಬಿಜೆಪಿ ಬೆಂಗಳೂರು ನಗರ ಘಟಕ ವಕ್ತಾರ ಎನ್ ಆರ್ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಈ ಬಗ್ಗೆ ದಾಖಲೆ ಬಿಡುಗಡೆಗೊಳಿಸಿದ ಅವರು, ಪ್ರಮುಖವಾಗಿ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಪಾಲಿಕೆಗೆ ಸೇರಿದ 160 ಕೋಟಿ ಮೌಲ್ಯದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ಕಂಪನಿಯೊಂದು ಸದ್ದಿಲ್ಲದೆ ಮಾರಾಟ ಮಾಡುವ ಪ್ರಯತ್ನ ಮಾಡುತ್ತಿದೆ ಆರೋಪಿಸಿದರು.
ವಿಠ್ಠಲ್ ಮಲ್ಯ ರಸ್ತೆಯ 12 ಎಕರೆ 17 ಗುಂಟೆ ಜಮೀನನ್ನು ಜೋಸೆಫ್ ಕ್ರಿಕೆಟ್ ಫೀಲ್ಡ್ಗೆ ಎಂದು ಕರ್ನಾಟಕ ಜುಯಿಸ್ಟ್ ಎಜುಕೇಶನಲ್ ಸೊಸೈಟಿಗೆ 99 ವರ್ಷಗಳ ಅವಧಿಗೆ ಬಿಬಿಎಂಪಿ ಗುತ್ತಿಗೆ ನೀಡಿತ್ತು. ಅಂದಿನ ಬೆಂಗಳೂರು ನಗರ ದಂಡು ಪ್ರದೇಶ ಹಾಗೂ ಬೆಂಗಳೂರು ನಗರ ಸಭೆ ಈ ಜಾಗವನ್ನು ಗುತ್ತಿಗೆ ನೀಡಿತ್ತು. ಆದರೆ ಕ್ರಿಕೆಟ್ ಫೀಲ್ಡ್ ನಿರ್ಮಾಣಕ್ಕಾಗಿ ಗುತ್ತಿಗೆ ಪಡೆದ ಈ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ವ್ಯವಸ್ಥಿತ ಸಂಚು ನಡೆದಿದೆ. ಪಾಲಿಕೆಯ ಕಂದಾಯ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರದಿಂದ ಈ ಜಾಗ ಸರ್ಕಾರದ ಜಾಗ ಎಂಬ ದಾಖಲೆಗಳನ್ನು ಕಳೆದುಕೊಂಡಿದೆ. ಆದ್ದರಿಂದ ಈ ಕೂಡಲೆ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ಪಾಲಿಕೆ ಆಸ್ತಿಯನ್ನು ಮರಳಿ ಪಡೆಯಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.