ದೊಡ್ಡಬಳ್ಳಾಪುರ: ತಾಲೂಕಿನ ಪಾಲನಜೋಗಿಹಳ್ಳಿ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಆಂಜನೇಯಸ್ವಾಮಿ ದೇವಾಲಯದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಿರ್ಗತಿಕರನ್ನು, ದಲಿತರನ್ನು ದೇವಾಲಯಕ್ಕೆ ಪ್ರವೇಶಿಸದಂತೆ ದೌರ್ಜನ್ಯ ಎಸಗುತ್ತಿರುವವರ ವಿರುದ್ದ ಕ್ರಮಕ್ಕಾಗಿ ಆಗ್ರಹಿಸಿ ಸಾರ್ವಜನಿಕರು ತಹಶೀಲ್ದಾರ್ ಮೋಹನಕುಮಾರಿ ಅವರಿಗೆ ಮನವಿ ಪತ್ರ ನೀಡಿದರು.
ದೇವಸ್ಥಾನದ ಮುಂಭಾಗ 134 ಸರ್ವೆ ನಂಬರಿನಲ್ಲಿರುವ 300x52 ಅಡಿಗಳಷ್ಟು ಸ್ಥಳದಲ್ಲಿರುವ ಹೂವಿನ ತೋಟ ಮತ್ತು ಅಶ್ವತ್ಥಕಟ್ಟೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಇದೇ ವೇಳೆ ಆರೋಪಿಸಲಾಗಿದೆ. ಈ ಜಾಗ ಒತ್ತುವರಿ ಮಾಡಿರುವ ರಾಮದಾಸ್, ವಿಜಯಕುಮಾರ್, ಉಮೇಶ್ ಅವರು ಇಲ್ಲಿನ ಪರಿಶಿಷ್ಠ ಜಾತಿ, ಪಂಗಡ ಹಾಗು ಹಿಂದುಳಿದ ವರ್ಗದವರನ್ನು ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಕ್ಕೆ ಬಿಡದೇ ದೌರ್ಜನ್ಯ ಎಸಗುತ್ತಿದ್ದಾರೆ. ಈ ಕುರಿತು ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಯು.ಮುನಿರಾಜು ಆಗ್ರಹಿಸಿದ್ದಾರೆ.
ಈ ವೇಳೆ ದಸಂಸ ರಾಜ್ಯ ಸಂಚಾಲಕ ಎಸ್.ಚಂದ್ರಶೇಖರ್, ಗ್ರಾಮಸ್ಥರಾದ ಹೆಚ್.ಕೃಷಪ್ಪ, ಪಿ.ಜಿ.ಮುನಿಕೃಷ್ಣಪ್ಪ,ಆರ್.ಮುನಿಕೃಷ್ಣ, ಎನ್.ಕೆಂಪಣ್ಣ ಸೇರಿದಂತೆ ಹಲವಾರು ಗ್ರಾಮಸ್ಥರು, ದಸಂಸ ಕಾರ್ಯಕರ್ತರು ಇದ್ದರು.
ಇದನ್ನೂ ಓದಿ:ಒಳಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯರದ್ದು ಗೋಸುಂಬೆ ರಾಜಕಾರಣ.. ನಾರಾಯಣಸ್ವಾಮಿ ಆರೋಪ