ನೆಲಮಂಗಲ: ನಾಮಪತ್ರ ಸಲ್ಲಿಸಲು ಹೋದ ಗ್ರಾಮ ಪಂಚಾಯಿತಿ ಚುನಾವಣೆಯ ಅಭ್ಯರ್ಥಿ ವಿರುದ್ಧ ಪಂಚಾಯಿತಿ ಅವರಣದಲ್ಲೇ ಹಲ್ಲೆ ನಡೆಸಿ ನಾಮಪತ್ರ ಕಸಿದುಕೊಂಡಿರುವ ಘಟನೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಲು ಮುಂದಾದಾಗ ಪೊಲೀಸರು ಸಹಕರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣ ದಾಖಲಿಸಲು ನೆಲಮಂಗಲ ಪೊಲೀಸರು ಹಿಂದೇಟು ಹಾಕಿದ್ದ ಹಿನ್ನೆಲೆ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋದ ವ್ಯಕ್ತಿಗೆ ನ್ಯಾಯ ನೀಡಿರುವ ಕೋರ್ಟ್, ಪ್ರಕರಣ ದಾಖಲಿಸುವಂತೆ ನೆಲಮಂಗಲ ಪೊಲೀಸರಿಗೆ ಸೂಚನೆ ನೀಡಿತ್ತು. ಆದರೆ ಕೋರ್ಟ್ ಆದೇಶಕ್ಕೂ ಬೆಲೆ ಕೊಡದ ಪೊಲೀಸರು ಆರೋಪಿಗಳ ವಿರುದ್ಧ ಇನ್ನೂ ಕಾನೂನು ಕ್ರಮ ಕೈಗೊಂಡಿಲ್ಲ ಎನ್ನಲಾಗ್ತಿದೆ.
ನೆಲಮಂಗಲ ತಾಲೂಕಿನ ಅಗಸರಹಳ್ಳಿ ನಿವಾಸಿ ಮಹದೇವಯ್ಯ ದಿನಾಂಕ 11/12/2020 ರಂದು ಟಿ. ಬೇಗೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಹೋಗಿದ್ದಾಗ ಮುನಿರಾಜು ಬಿ. ಕೆ, ಬೈರೇಗೌಡ, ನವೀನ್ ಕುಮಾರ್, ರಂಗನಾಥ್, ಸುನಂದಮ್ಮ, ದ್ರಾಕ್ಷಣಮ್ಮ ಎಂಬುವರು ನಾಮಪತ್ರ ಸಲ್ಲಿಸಲು ಬಂದಿದ್ದ ಮಹದೇವಯ್ಯನ ಮೇಲೆ ಹಲ್ಲೆ ನಡೆಸಿ ನಾಮಪತ್ರ ಸೇರಿದಂತೆ ದಾಖಲೆಗಳನ್ನ ಕಿತ್ತುಕೊಂಡಿದ್ದಾರೆ. ಇನ್ನೂ ಹಲ್ಲೆಗೊಳಗಾದ ವ್ಯಕ್ತಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಮತ್ತು ನಾಮಪತ್ರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಆದರೆ ನೆಲಮಂಗಲ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆ ಎಸ್ಪಿ ರವಿ ಚನ್ನಣ್ಣನವರಿಗೂ ದೂರು ನೀಡಿದ್ದು, ಅವರಿಂದಲು ದೂರುದಾರನಿಗೆ ನ್ಯಾಯ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ನೊಂದ ದೂರುದಾರ ಮಾಹದೇವಯ್ಯನ ವಕೀಲರಾದ ಮುರುಳಿ ಎಸ್. ಎಂ. ಅವರು ಪ್ರಿನ್ಸಿಪಲ್ ಸಿವಿಲ್ ಜಡ್ಜ್ & ಜೆಎಂಎಫ್ಸಿ ನೆಲಮಂಗಲದಲ್ಲಿ PCR NO: 225/2020 ಪ್ರಕರಣ ದಾಖಲಿಸಿದ್ದಾರೆ. ವಾದ ಆಲಿಸಿದ ನ್ಯಾಯಾಲಯವು ಆರೋಪಿಗಳಾದ ಮುನಿರಾಜು ಬಿ. ಕೆ @ಕೋಳಿಮುನಿಯಾ, ಬೈರೆಗೌಡ@ಹಗಲು, ನವೀನಕುಮಾರ್ @ ಬುರುಡೆದಾಸ, ರಂಗನಾಥ @ಕೆರೆರಂಗ@ಹಂದಿರಂಗ, ದ್ರಾಕ್ಷಾಯಣಮ್ಮ ಮತ್ತು ಸುನಂದಮ್ಮ ಅವರ ವಿರುದ್ಧ IPC ಕಲಂ 143,147,447,326,504,307,& 394 ರ ಅಡಿಯಲ್ಲಿ FIR ದಾಖಲಿಸುವಂತೆ ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ದಿನಾಂಕ 19/12/2020 ರಂದು ನಿರ್ದೇಶನ ನೀಡಿದೆ.
ಆದರೆ, ಕೋರ್ಟ್ ನಿರ್ದೇಶಕನಕ್ಕೂ ಬೆಲೆ ಕೊಡದೆ ಹಣ ಮತ್ತು ರಾಜಕೀಯವಾಗಿ ಪ್ರಭಾವಿಗಳಾಗಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನೆಲಮಂಗಲ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಈ ಹಿನ್ನೆಲೆ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಮಹದೇವಯ್ಯ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.