ಯಲಹಂಕ : ವಿವಾದಿತ ವೀರ ಸಾವರ್ಕರ್ ಮೇಲ್ಸೇತುವೆ ಉದ್ಘಾಟನೆಯನ್ನು ಮತ್ತೆ ಮುಂದೂಡಲಾಗಿದೆ. ಮೇಲ್ಸೇತುವೆಯನ್ನು ಸಿಎಂ ಯಡಿಯೂರಪ್ಪರ ಇಂದು ಉದ್ಘಾಟನೆ ಮಾಡಬೇಕಿತ್ತು. ಆದರೆ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ ಹಿನ್ನೆಲೆಯಲ್ಲಿ ಉದ್ಘಾಟನೆ ದಿನವನ್ನು ಮತ್ತೆ ಮುಂದೂಡಲಾಗಿದೆ.
ಯಲಹಂಕದ ಡೈರಿ ಸರ್ಕಲ್ ಬಳಿ 34 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದ್ದು, ಮೇಲ್ಸೇತುವೆಗೆ ಸಾವರ್ಕರ್ ಎಂದು ಹೆಸರಿಡಲು ಬಿಬಿಎಂಪಿ ಸಹ ಅನುಮೋದನೆ ನೀಡಿತ್ತು. ಸಾವರ್ಕರ್ ಜನ್ಮ ದಿನದಂದ್ದು ಮುಖ್ಯಮಂತ್ರಿಯಿಂದ ಉದ್ಘಾಟನೆಯಾಗಬೇಕಿತ್ತು. ಆದರೆ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರಿಂದ ಸಾವರ್ಕರ್ ಹೆಸರಿಗೆ ವಿರೋಧ ವ್ಯಕ್ತವಾಗಿತ್ತು.
ಸಾವರ್ಕರ್ ಹೆಸರಿನ ವಿಚಾರಕ್ಕೆ ಸಾರ್ವಜನಿಕ ವಲಯದಲ್ಲೂ ವಾದ-ವಿವಾದ ನಡೆದಿತ್ತು. ಇದರಿಂದ ಸಾವರ್ಕರ್ ಮೇಲ್ಸೇತುವೆಯ ಉದ್ಘಾಟನೆಯನ್ನ ಮುಂದೂಡಲಾಗಿತ್ತು. ಆದರೆ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಇಟ್ಟೇ ಇಡುವುದಾಗಿ ಹೇಳಿದ್ದರು. ಹಾಗೆಯೇ ಇಂದು ಮುಖ್ಯಮಂತ್ರಿ ಯಡಿಯೂರಪ್ಪರವರಿಂದ ಬೆಳಗ್ಗೆ 11:30ಕ್ಕೆ ಮೇಲ್ಸೇತುವೆ ಉದ್ಘಾಟನೆ ಆಗಬೇಕಿತ್ತು. ಆದರೆ, ನಿನ್ನೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನ ಹಿನ್ನೆಲೆ ಉದ್ಘಾಟನಾ ಸಿದ್ಧತೆಯನ್ನು ನಿಲ್ಲಿಸಲಾಗಿದ್ದು ಮತ್ತೆ ಮುಂದೂಡಲಾಗಿದೆ.