ದೊಡ್ಡಬಳ್ಳಾಪುರ: ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಹಣ ಡ್ರಾ ಮಾಡಿ ಕಾರ್ಡ್ನ್ನು ಎಟಿಎಂನಲ್ಲಿಯೇ ಬಿಟ್ಟು ಹಣ ಎಣಿಸುತ್ತಾ ಇದ್ದರೆ ವಂಚಕರ ಜಾಲಕ್ಕೆ ಬಿಳೋದು ಪಕ್ಕಾ. ಎಟಿಎಂ ಕಾರ್ಡ್ ಕೊಟ್ಟು ಸಹಾಯ ಮಾಡುವ ನೆಪದಲ್ಲಿ ಬರುವ ವಂಚಕರು ನಿಮ್ಮ ಎಟಿಎಂ ಕಾರ್ಡ್ನ್ನು ಬದಲಾಯಿಸುತ್ತಾರೆ. ನಿವೃತ್ತ ಶಿಕ್ಷಕಿಯ ಎಟಿಎಂ ಕಾರ್ಡ್ ಬದಲಾಯಿಸಿದ ವಂಚಕರು ನಿವೃತ್ತ ಶಿಕ್ಷಕಿಯ ಅಕೌಂಟ್ನಲ್ಲಿದ್ದ 6 ಲಕ್ಷದ 65 ಸಾವಿರ ರೂಪಾಯಿ ಹಣ ಡ್ರಾ ಮಾಡಿದ್ದಾರೆ.
ಎಟಿಎಂ ಕಾರ್ಡ್ ಬದಲಾಯಿಸಿ ವಂಚನೆ: ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಿಹಳ್ಳಿಯ ಪ್ರಿಯದರ್ಶಿನಿ ಬಡಾವಣೆಯ ನಿವಾಸಿ ಪಾರ್ವತಮ್ಮ ವಂಚನೆಗೊಳಗಾದವರು. ನಿವೃತ್ತಿ ನಂತರ ಬಂದ ಹಣ ಮತ್ತು ಪೆನ್ಷನ್ ಹಣವನ್ನು ದೊಡ್ಡಬಳ್ಳಾಪುರ ನಗರದ ಯೂನಿಯನ್ ಬ್ಯಾಂಕ್ನಲ್ಲಿ ಇಟ್ಟಿದ್ರು. ಪಾರ್ವತಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಪತಿ ಕಾಳಾಚಾರ್ ಅವರು ಬ್ಯಾಂಕ್ ವ್ಯವಹಾರ ನೋಡಿಕೊಳ್ಳುತ್ತಾರೆ. ಆದರೆ ಇವರು ಹಣವನ್ನು ಡ್ರಾ ಮಾಡಲು ಎಟಿಎಂಗೆ ತೆರಳಿದಾಗ ವಂಚಕನೊಬ್ಬ ಕಾರ್ಡ್ ಬದಲಾಯಿಸಿ ಯಮಾರಿಸಿದ್ದಾನೆ.
'ಕಾರ್ಪೋರೇಷನ್ ಬ್ಯಾಂಕ್ ಪಕ್ಕದಲ್ಲಿಯೇ ಎಟಿಎಂ ಇದೆ. ಅಲ್ಲಿಗೆ ಹೋಗಿ 2 ಸಾವಿರ ಹಣ ಡ್ರಾ ಮಾಡುತ್ತಿದ್ದೆ. ಆಗ ಹಿಂದಿನಿಂದ ಯಾರೋ ಇಬ್ಬರು ಬಂದ್ರು. ಆಗ ನಾನು ಕಾರ್ಡ್ನ್ನು ಎಟಿಎಂನಲ್ಲಿಯೇ ಬಿಟ್ಟು ಹಣವನ್ನು ಎಣಿಸುತ್ತಿದ್ದೆ. ಆಗ ಅವರು ನಿಮ್ಮ ಕಾರ್ಡ್ ತೆಗೆದುಕೊಳ್ಳಿ ಎಂದು ಅವರ ಕಾರ್ಡ್ ಕೊಟ್ಟು ನನ್ನ ಕಾರ್ಡ್ನ್ನು ತೆಗೆದುಕೊಂಡು ಹೋಗಿದ್ದಾರೆ. ಆಮೇಲೆ ನಾನು ಕಾರ್ಡ್ ಬಗ್ಗೆ ಗಮನವನ್ನೇ ಹರಿಸಿಲ್ಲ. ಇದು ಕಾರ್ಪೋರೇಷನ್ ಬ್ಯಾಂಕ್ ಕಾರ್ಡ್ ಎಂದು ಸುಮ್ಮನಾದೆ. ಇನ್ನೊಮ್ಮೆ ಬ್ಯಾಂಕ್ಗೆ ಹೋದಾಗ ಅಲ್ಲಿ ಎಟಿಎಂ ವರ್ಕ್ ಆಗುತ್ತಿರಲಿಲ್ಲ. ಆಮೇಲೆ ವಿಚಾರಿಸಿದಾಗ ಇದಕ್ಕೆ ಸಂಬಂಧಿಸಿದ ಅಧಿಕಾರಿ ಬಂದಾಗ ಮಾತ್ರ ವರ್ಕ್ ಆಗುತ್ತೆ ಎಂದರು. ಮತ್ತೆ ಮನೆಗೆ ಬಂದೆ. ಹೆಂಡತಿಗೆ ಹುಷಾರಿಲ್ಲದ್ದರಿಂದ ಎಟಿಎಂ ಕಾರ್ಡ್ ಚೇಂಜ್ ಮಾಡಿಸಲು ಆಗಿರಲಿಲ್ಲ.
ಮತ್ತೆ ಎರಡು ಮೂರು ಬಾರಿ ಎಟಿಎಂಗೆ ಹೋದ್ರೂ ಕೂಡಾ ಎಟಿಎಂನಲ್ಲಿ ಹಣವನ್ನು ಡ್ರಾ ಮಾಡಲು ಸಾಧ್ಯವಾಗಲೇ ಇಲ್ಲ. ನಂತರ ಆಗಸ್ಟ್ 25 ರಂದು ಚೆಕ್ ಮೂಲಕ 50 ಸಾವಿರ ಹಣ ಡ್ರಾ ಮಾಡಲು ಪ್ರಯತ್ನಿಸಿದಾಗ ಹಣ ಡ್ರಾ ಆಗಲಿಲ್ಲ. ಪುನಃ ನನ್ನ ಅಕೌಂಟ್ನಲ್ಲಿ ಇಷ್ಟು ಹಣವಿತ್ತು ಎಂದು ವಿಚಾರಿಸಿದಾಗ ಅವರು ಎಟಿಎಂನ ಸಿಸಿ ಕ್ಯಾಮರಾ ಫೂಟೇಜ್ನ್ನು ಚೆಕ್ ಮಾಡಿದಾಗ ವಂಚಕ 6 ಲಕ್ಷದ 65 ಸಾವಿರ ಹಣ ಡ್ರಾ ಮಾಡಿರುವ ಬಗ್ಗೆ ಮಾಹಿತಿ ನೀಡಿದರು' ಎಂದು ಪಾರ್ವತಮ್ಮ ಅವರ ಪತಿ ಕಾಳಾಚಾರ್ ಬೇಸರ ವ್ಯಕ್ತಪಡಿಸಿದರು.
ಅಳಲು ತೋಡಿಕೊಂಡ ನಿವೃತ್ತ ಶಿಕ್ಷಕಿ: 'ನನಗೆ ನಿವೃತ್ತಿಯ ನಂತರ ಬಂದ ಹಣವನ್ನು ಆಸ್ಪತ್ರೆ ಖರ್ಚಿಗಾಗಿ ಇಟ್ಟುಕೊಂಡಿದ್ದೆ. ನಮ್ಮ ಪತಿ ಆಸ್ಪತ್ರೆಯ ಖರ್ಚನ್ನು ನೋಡಿಕೊಳ್ಳುತ್ತಾರೆ. ಒಮ್ಮೆ ಇವರು ಇಷ್ಟು ಹಣ ಹೋಗಿದೆ ಅಂದ್ರು. ಆಗ ನನಗೆ ಟೆನ್ಷನ್ ಆಯ್ತು. ನನಗೆ ಪ್ರತಿ ತಿಂಗಳು 10 ಸಾವಿರ ರೂ. ಬೇಕು. ಶುಗರ್ ಲೆವೆಲ್ ಅನ್ನು ಚೆಕ್ ಮಾಡಿಕೊಳ್ಳಬೇಕು' ಎಂದು ನಿವೃತ್ತ ಶಿಕ್ಷಕಿ ಪಾರ್ವತಮ್ಮ ತಮ್ಮ ಅಳಲನ್ನು ತೋಡಿಕೊಂಡರು.
ಪಾರ್ವತಮ್ಮ ಅವರ ಎಟಿಎಂ ಕಾರ್ಡ್ನಿಂದ ಖದೀಮ ಜುಲೈ 27 ರಿಂದ ಆಗಸ್ಟ್ 21 ರವರೆಗೆ ಗೋವಾ ಮತ್ತು ಪಣಜಿಯಲ್ಲಿ ಸಾಕಷ್ಟು ಸಲ ಹಣ ಡ್ರಾ ಮಾಡಿದ್ದಾನೆ. ಇಲ್ಲಿಯವಗೆ 6 ಲಕ್ಷದ 65 ಸಾವಿರ ಡ್ರಾ ಮಾಡಲಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಪಾರ್ವತಮ್ಮನವರಿಗೆ ಈ ಹಣವೇ ಚಿಕಿತ್ಸೆಗೆ ಸಹಕಾರಿಯಾಗಿತ್ತು. ದೊಡ್ಡಬಳ್ಳಾಪುರ ನಗರದಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ತನಿಖೆ ಮಾತ್ರ ಆರಂಭನೇ ಆಗಿಲ್ಲ. ಎಟಿಎಂ ಕೇಂದ್ರದ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ಮಾಡಿದ್ರೆ ವಂಚಕನನ್ನು ಬೇಗ ಹಿಡಿಯಬಹುದು.
ಓದಿ: ಮನೆ ಮುಂದೆ ಬೈಕ್ ನಿಲ್ಲಿಸಿ ಮಾತನಾಡಿದ್ದೇ ತಪ್ಪಾಯ್ತು.. ಯುವಕನ ಮೇಲೆ ಗುಂಡಿನ ದಾಳಿ