ನೆಲಮಂಗಲ(ಬೆಂ.ಗ್ರಾಮಾಂತರ): ತುಮಕೂರು ರಸ್ತೆಯಲ್ಲಿರುವ 8ನೇ ಮೈಲಿ ಜಂಕ್ಷನ್ ಬಳಿಯ ಅಭಯ ವಸಿಷ್ಠ ಆಸ್ಪತ್ರೆಯಲ್ಲಿ, ಸೂಪರ್ ಸ್ಪೆಷಾಲಿಟಿ ಸೇವೆಗಳು ಮತ್ತು 50 ಹಾಸಿಗೆಗಳ ಕೋವಿಡ್ ಚಿಕಿತ್ಸಾ ಕೇಂದ್ರವನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಜಂಟಿಯಾಗಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ನಗರದಲ್ಲಿ ಹೆಚ್ಚುತ್ತಿದೆ. ಹೀಗಾಗಿ ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡುವ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕುವಂತೆ ಮಾಡುವ ತುರ್ತು ಅಗತ್ಯವಿದೆ. ಸರ್ಕಾರ ತನ್ನ ಎಲ್ಲಾ ಪ್ರಯತ್ನಗಳನ್ನ ಪ್ರಾಮಾಣಿಕವಾಗಿ ಮಾಡುತ್ತಿದೆ. ಈ ವೇಳೆ ಖಾಸಗಿ ಆಸ್ಪತ್ರೆಗಳು ಕೂಡಾ ಈ ಆಸ್ಪತ್ರೆ ರೀತಿಯಲ್ಲಿ ಪ್ರತ್ಯೇಕ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಇಂತಹ ಸಂಕಷ್ಟದಲ್ಲಿ ಸರ್ಕಾರದ ಜೊತೆಯಾಗಬೇಕು ಎಂದರು.
ಶಾಸಕ ಎಸ್. ಆರ್. ವಿಶ್ವನಾಥ್ ಮಾತನಾಡಿ, ಅಭಯ ವಸಿಷ್ಠ ಆಸ್ಪತ್ರೆ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನ ಕೈಗೊಳ್ಳುತ್ತಾ ಬರುತ್ತಿದೆ. ಆಸ್ಪತ್ರೆಯಲ್ಲಿಯೂ ಅತ್ಯುತ್ತಮ ಸೇವೆಯನ್ನ ನೀಡುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ಇತ್ತೀಚಿಗೆ ಏಳೆಂಟು ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸಿದ್ದ ಕೋವಿಡ್ ಸೋಂಕಿತನನ್ನ, ಅಭಯ ವಸಿಷ್ಠ ಆಸ್ಪತ್ರೆಯು ದಾಖಲಿಸಿಕೊಂಡು ಚಿಕಿತ್ಸೆ ನೀಡಿತ್ತು. ಹೀಗೆ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡುವುದು ಈ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಅನಿವಾರ್ಯವಾಗಿದೆ ಎಂದರು.
ಆಸ್ಪತ್ರೆಯು ನೀಡುತ್ತಿರುವ ಸೇವೆಯ ಕುರಿತು ಮಾತನಾಡಿದ ಆಸ್ಪತ್ರೆಯ ಸಿಇಒ ಡಾ.ಶ್ರೀನಿವಾಸ್ ಚಿಕರಕುರಿ, ನಾವು ಕೋವಿಡ್ ಸೋಂಕಿತರಿಗೆ, ಕೋವಿಡ್ ಆಸ್ಪತ್ರೆ ಹಾಗೂ ಚಿಕಿತ್ಸಾ ಕೇಂದ್ರ ಎರಡು ಕಡೆಗಳಲ್ಲಿ ಸೇವೆ ನೀಡುತ್ತೇವೆ. ನಮ್ಮ ಮುಖ್ಯ ಆಸ್ಪತ್ರೆಯಲ್ಲಿ ಸೋಂಕಿತರಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸೋಂಕು ದಿಢೀರೆಂದು ಹೆಚ್ಚಾಗಿದ್ದುದರಿಂದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಕೊಂಚ ಸಮಸ್ಯೆಯಾಗುತ್ತಿದೆ. ಹೀಗಾಗಿ ಈ ಪರಿಸ್ಥಿತಿಯಲ್ಲಿ ನಾವು ನಮ್ಮ ಕರ್ತವ್ಯ ನಿಭಾಯಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದರು.
ನಮ್ಮ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರನ್ನು ಕೂಡಾ ಈ ಪರಿಸ್ಥಿತಿಗೆ ತಯಾರಾಗುವಂತೆ ಸೂಕ್ತ ತರಬೇತಿ ನೀಡಿದ್ದೇವೆ. ಅವರು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡು ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಿದ್ದಾರೆ. ಈ ವೇಳೆ ಸಾರ್ವಜನಿಕರು ಕೂಡಾ ಕಡ್ಡಾಯವಾಗಿ ಮುನ್ನೆಚ್ಚರಿಕೆಗಳನ್ನ ಕೈಗೊಳ್ಳುವ ಮೂಲಕ ಸೋಂಕು ಹರಡದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಆಸ್ಪತ್ರೆಯು ಆಂಕಾಲಜಿ, ಕಾರ್ಡಿಯಾಲಜಿ, ಗ್ಯಾಪಸ್ಟ್ರೋಎಂಟೆರಾಲಜಿ, ಯುರಾಲಜಿ, ನೆಫ್ರಾಲಜಿ, ಪಲ್ಮನಾಲಜಿ ಮತ್ತು ನ್ಯೂರೋಸೈನ್ಸ್ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನ ಆರಂಭಿಸಿದೆ. ನಗರದ ಈ ಭಾಗದಲ್ಲಿನ ನಾಗರಿಕರಿಗೆ ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷೆಯನ್ನ ಆಸ್ಪತ್ರೆಯು ಹೊಂದಿದೆ. ಆ ನಿಟ್ಟಿನಲ್ಲಿ ರೂಪಗೊಂಡಿದ್ದೆ 50 ಹಾಸಿಗೆಗಳ ಕೋವಿಡ್ ಚಿಕಿತ್ಸಾ ಕೇಂದ್ರ ಎಂದರು.
ಈಗಾಗಲೇ ಅಭಯ ವಸಿಷ್ಠ ಆಸ್ಪತ್ರೆಯು ಕಳೆದ ಮೂರು ವಾರಗಳ ಹಿಂದೆಯೇ ಹೋಟೆಲ್ನಲ್ಲಿ 40 ಕೋಣೆಗಳ ಕೋವಿಡ್ ಚಿಕಿತ್ಸಾ ಕೇಂದ್ರವನ್ನ ಆರಂಭಿಸಿ ಚಿಕಿತ್ಸೆ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಈಗ 50 ಹಾಸಿಗೆಗಳ ಆಸ್ಪತ್ರೆಯನ್ನ ತುಮಕೂರು ರಸ್ತೆಯ ಮಾದನಾಯಕನಹಳ್ಳಿಯಲ್ಲಿ ಆರಂಭಿಸಿದೆ. ಇಲ್ಲಿ ಸಾಮಾನ್ಯ ಸೋಂಕಿತರ ಜೊತೆಗೆ ಸೋಂಕಿತ ಗರ್ಭಿಣಿಯರಿಗೆ, ಸೋಂಕಿತ ಡಯಾಲಿಸಿಸ್ ರೋಗಿಗಳಿಗೆ ಹಾಗೂ ಸೋಂಕಿತರಿಗೆ ತುರ್ತು ಶಸ್ತ್ರಚಿಕಿತ್ಸೆಗಳನ್ನ ಕೂಡಾ ಇಲ್ಲಿ ನಡೆಸಲಾಗುತ್ತದೆ. ಇದರಿಂದಾಗಿ ಗರ್ಭಿಣಿ ಸ್ತ್ರೀಯರಿಗೆ ಅತೀ ದೊಡ್ಡ ಲಾಭವಾಗಿದ್ದು, ಚಿಕಿತ್ಸೆಗಾಗಿ ಅಲೆದಾಡುವ ಸಂಕಷ್ಟ ತಪ್ಪಲಿದೆ.