ದೇವನಹಳ್ಳಿ : ಪಾಸ್ತಾ ತಯಾರಿಸುವ ಮಷಿನ್ ಒಳಗೆ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಕೇರಳ ಮೂಲದ ಪ್ರಯಾಣಿಕನೋರ್ವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಕ್ಟೋಬರ್ 14 ರಂದು ಇಂಡಿಗೋ ವಿಮಾನದಲ್ಲಿ ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈತ ಬಂದಿಳಿದಿದ್ದ. ಈ ಪ್ರಯಾಣಿಕನ ಮೇಲೆ ಸಂಶಯವಿದ್ದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಮರೆಮಾಚಿ ಚಿನ್ನ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಪಾಸ್ತಾ ತಯಾರಿಸುವ ಯಂತ್ರದ ಒಳಗೆ ಚಿನ್ನದ ರಾಡ್ಗಳನ್ನು ಅಡಗಿಸಿ ಅಕ್ರಮ ಸಾಗಣಿಕೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಾಸರಗೋಡಿನ 41 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ 598 ಗ್ರಾಂ ತೂಕದ 35.38 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.
ಮರ್ಮಾಂಗದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಮಹಿಳೆ : ಕಳೆದ ಸೆಪ್ಟೆಂಬರ್ 13 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಅಕ್ರಮವಾಗಿ ಮಾರ್ಮಾಂಗದಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು. ವಿದೇಶದಿಂದ ಕೆಂಪೇಗೌಡ ಏರ್ಪೋಟ್ಗೆ ಬಂದ ಮಹಿಳೆಯನ್ನು ತೀವ್ರವಾಗಿ ತಪಾಸಣೆ ಮಾಡಿದಾಗ ಮಾರ್ಮಾಂಗದಲ್ಲಿ ಡ್ರಗ್ಸ್ ಕ್ಯಾಪ್ಸುಲ್ ಪತ್ತೆಯಾಗಿತ್ತು. ಆರೋಪಿ ಮಹಿಳೆ ಕೀನ್ಯಾ ದೇಶದವರಾಗಿದ್ದು, 1 ಕೆಜಿ 144 ಗ್ರಾಂ ತೂಕದ ಕೊಕೇನ್ ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ : ಬೆಂಗಳೂರು : ಮರ್ಮಾಂಗದಲ್ಲಿಟ್ಟು ಕೋಟ್ಯಂತರ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಮಹಿಳೆ ವಶಕ್ಕೆ
ಹಾಗೆಯೇ, ವಿಮಾನದ ಶೌಚಾಲಯದ ವಾಶ್ ಬೇಸಿನ್ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಕಳೆದ 3 ದಿನಗಳ ಹಿಂದಷ್ಟೇ ಭೇದಿಸಿದ್ದಾರೆ. ಆಕ್ಟೋಬರ್ 17 ರಂದು ಮಾಲ್ಡಿವ್ಸ್ನ ಮಾಲೆಯಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಅಕ್ರಮವಾಗಿ ಸಾಗಿಸಲು ಬಚ್ಚಿಡಲಾಗಿದ್ದ ಚಿನ್ನ ಪತ್ತೆ ಮಾಡಲಾಗಿತ್ತು. 3.2 ಕೆಜಿ ತೂಕದ 1.8 ಕೋಟಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಿಮಾನವನ್ನು ತಪಾಸಣೆ ನಡೆಸಿದಾಗ ಶೌಚಾಲಯದ ವಾಶ್ ಬೆಸಿನ್ನಲ್ಲಿ ಅಡಗಿಸಿಟ್ಟಿದ್ದ ಬ್ಯಾಗ್ ಪತ್ತೆಯಾಗಿತ್ತು.
ಕಳೆದ ಅಕ್ಟೋಬರ್ 4 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಳು. ಈ ವೇಳೆ ಮಹಿಳೆ ತಡೆದು ಪರೀಕ್ಷಿಸುವಾಗ ಯಂತ್ರದಲ್ಲಿ ಬೀಪ್ ಶಬ್ದ ಉಂಟಾಗಿದೆ. ಪರಿಶೀಲನೆ ನಡೆಸಿದಾಗ ಆಕೆಯ ದೇಹದಲ್ಲಿ ಚಿನ್ನದ ಇರುವಿಕೆಯನ್ನು ಸೂಚಿಸಿದೆ. ವಿದೇಶದಿಂದ ಬಂದ ಮಹಿಳೆ ಗುದನಾಳದಲ್ಲಿ 2 ಗೋಳಾಕಾರದ ವಸ್ತುಗಳನ್ನು ಅಡಗಿಸಿಟ್ಟುಕೊಂಡು ಸಾಗಣೆ ಮಾಡುತ್ತಿರುವುದು ಪತ್ತೆಯಾಗಿತ್ತು.
ಇದನ್ನೂ ಓದಿ : ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ ಮಹಿಳೆ.. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಚಾಲಾಕಿ