ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪ್ರವಾಹ ಭೀತಿ ಉಂಟಾಗಿದೆ.
ನದಿ ತೀರದ ಗ್ರಾಮಗಳ ಜನರು ಮಳೆ ನಿಂತು, ಪ್ರವಾಹದಿಂದ ಕಾಪಾಡುವಂತೆ ದೇವರ ಮೊರೆ ಹೋಗಿದ್ದಾರೆ. ಇಲ್ಲಿನ ಟಕ್ಕೂಡ ಗ್ರಾಮಸ್ಥರು ಹನಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸ್ಥಳೀಯ ಆಂಜನೇಯನಿಗೆ ಕರ್ಪೂರ, ಊದುಬತ್ತಿ ಬೆಳಗಿ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು.
ಜಮಖಂಡಿ ತಾಲೂಕಿನ 15ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಕಬ್ಬು ಬೆಳೆ ನಾಶವಾಗಿದೆ. ಇಲ್ಲಿನ ರಾಜ್ಯ ಹೆದ್ದಾರಿ ಬಂದ್ ಆಗಿದ್ದರಿಂದ ಜನರು ಆತಂಕಗೊಂಡಿದ್ದಾರೆ.
ನಡುಗಡ್ಡೆಯಂತಾದ ಗ್ರಾಮದ ನೂರಾರು ಕುಟುಂಬಗಳು ಜಾನುವಾರುಗಳ ಜೊತೆ ಸುರಕ್ಷಿತ ಸ್ಥಳಕ್ಕೆ ಹೊರಟಿದ್ದಾರೆ. ಕೆಲವು ಕುಟುಂಬಗಳು ಸ್ಥಳಾಂತರಕ್ಕೆ ಒಪ್ಪದ ಹಿನ್ನೆಲೆ ಜಮಖಂಡಿ ತಾಲೂಕು ಆಡಳಿತ ಹರಸಾಹಸ ಪಡುತ್ತಿದೆ.
ಗ್ರಾಮಕ್ಕೆ ತಹಶೀಲ್ದಾರ ಪ್ರಶಾಂತ ಚಿನ್ನಗೊಂಡ, ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಕ್ಷಿತ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಸ್ಥಳಾಂತರ ಜಾಗದಲ್ಲಿ ನಿರಾಶ್ರಿತರ ಕೇಂದ್ರ ಸೇರಿದಂತೆ ಮೂಲ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.