ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟದ ವಿಚಾರವಾಗಿ ಮಾತನಾಡಿದ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನರ್, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗದೆ ಹಿನ್ನೆಡೆ ಯಾಗುತ್ತಿದೆ. ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ನಿರಾಣಿ ಕಾರಣ. ಶಿಗ್ಗಾವಿಯ ಬೊಮ್ಮಾಯಿ ಅವರ ಮನೆ ಮುಂದೆ ಹೋರಾಟ ಮಾಡುವ ವೇಳೆ ಮೀಸಲಾತಿ ಕೊಡಬಾರದು ಎಂದು ನಾಯಕರಿಂದ ಒತ್ತಾಯ ಇದೆ ಎಂದು ತಿಳಿದು ಬಂದಿದೆ ಎಂದು ಹೇಳಿದರು.
ಮೀಸಲಾತಿ ಕೊಡಲು ಯಡಿಯೂರಪ್ಪ ಅವರೇ ಬಿಡುತ್ತಿಲ್ಲ: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನದಲ್ಲಿ ಪ್ರಶ್ನೆ ಕೇಳಿದಾಗ ಸ್ವತಃ ಅವರೇ, ಇನ್ನೂ ಆರು ತಿಂಗಳ ಒಳಗೆ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಪಡೆದು ಮೀಸಲಾತಿ ಘೋಷಿಸುವುದಾಗಿ ಹೇಳಿದ್ದರು. ಅಲ್ಲದೇ ಸದನದಲ್ಲಿ ಈ ಆಶ್ವಾಸನೆ ಕೊಟ್ಟ ಆರು ತಿಂಗಳವರೆಗೆ ಯಡಿಯೂರಪ್ಪನವರು ಅಧಿಕಾರದಲ್ಲೂ ಇದ್ದರು ಆದರೆ ಮೀಸಲಾತಿ ಬಗ್ಗೆ ಮಾತನಾಡಲಿಲ್ಲ. ಇದರಿಂದ ಅವರ ಮೇಲೆಯೇ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಯಡಿಯೂರಪ್ಪನವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬಾರದೆಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ತಿರುಪತಿಯಲ್ಲಿ ಆಣೆ ಮಾಡಿಸಿದ್ದಾರಂತೆ. ಯಡಿಯೂರಪ್ಪನವರೇ ಲಿಂಗಾಯತ ಲೀಡರ್ ಆಗಬೇಕು, ಇಲ್ಲಾ ಅವರ ಮಗ ಆಗಬೇಕು ಆ ಉದ್ದೇಶಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ಕಾಶಪ್ಪನವರ ಆರೋಪ ಮಾಡಿದರು.
ಸಿಡಿ ವಿಚಾರಕ್ಕೆ ಕಾಶಪ್ಪನವರ್ ಟಾಂಗ್: ಬಿಜೆಪಿ ನಾಯಕರಾದ ಸಚಿವ ಮುರುಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ ಯತ್ನಾಳ್ ಅವರ ಸಿಡಿ ವಿಚಾರಕ್ಕೆ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಟಾಂಗ್ ನೀಡಿದ್ದಾರೆ. ರಾಜ್ಯದಲ್ಲಿ ಸಿಡಿ ವಿಚಾರ ಬಿಜೆಪಿಗರಿಗೆ ಹೊಸದೇನಲ್ಲ ಈ ಸರ್ಕಾರದಲ್ಲಿ ಒಬ್ಬರಿಗೆ ಸಿಡಿ ಬಾಬಾ ಅಂತ ಕರೆಯುತ್ತಾರೆ. ಅವರು ಮಂತ್ರಿ ಕೂಡ ಆಗಿದ್ದಾರೆ. ಸಿಡಿ ಬಾಬಾ ಅಂತ ಅವರನ್ನು ಕರೆಯುತ್ತಾರೆ ಎಂದು ಕಾಶಪ್ಪನವರ್ ಟೀಕಿಸಿದ್ದಾರೆ.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ 15 ಜನರ ಸಿಡಿ: ಅವರು ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತ, ಕಾಂಗ್ರೆಸ್ನಿಂದ 15 ಜನ ಶಾಸಕರು ನಮ್ಮನ್ನು ಬಿಟ್ಟು ಹೋದರಲ್ಲ. ಅವರದೆಲ್ಲ ಸಿಡಿ ಇದೆ ಅಂತ ನನಗೂ ಮಾಹಿತಿ ಇದೆ. ಅವರೆಲ್ಲರೂ ಸ್ಟೇ ತೆಗೆದುಕೊಂಡಿದ್ದಾರೆ. ಸಿಡಿ ಬಾಬಾ ಕೂಡ ಸ್ಟೇ ತೆಗೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಯತ್ನಾಳ್ ಮತ್ತು ನಿರಾಣಿ ವಿರುದ್ಧ ಸಿಡಿ ವಿಚಾರವಾಗಿ ನಡೆಯುತ್ತಿರುವ ವಾಗ್ದಾಳಿ ಇನ್ನಷ್ಟು ಪುಷ್ಟಿ ನೀಡಿದ್ದಾರೆ.
15 ಶಾಸಕರಿಗೂ ಸಿಡಿ ಬಗ್ಗೆ ಭಯ ಇದೆ. ಇವರೆಲ್ಲ ಎಲ್ಲಿ ಮಲಗಿದಾರೊ ಯಾರ ಜೊತೆ ಮಲಗಿದಾರೊ ಗೊತ್ತಿಲ್ಲ. 15 ಜನರ ಸಿಡಿಗಳನ್ನು ಇವರು ಖರೀದಿ ಮಾಡಿ ಇಟ್ಟುಕೊಂಡಿದ್ದಾರಂತೆ. ಅದಕ್ಕೆ ಸಿಡಿ ಬಾಬಾ ಅಂತ ಕರೆಯುತ್ತಾರೆ. ಇವರು ಮಂತ್ರಿ ಆಗಿದ್ದು ಸಿಡಿ ಹಾಕಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಎಂದು ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿಗೆ ಟಾಂಗ್ ನೀಡಿದರು.
ಸ್ಯಾಂಟ್ರೋ ರವಿ ವಿಚಾರವಾಗಿ ಮಾತನಾಡಿ, ಸ್ಯಾಂಟ್ರೋ ರವಿ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಈ 15 ಜನ ಬಾಂಬೆಯ ಸೆವೆನ್ ಸ್ಟಾರ್ ಹೋಟೆಲ್ನಲ್ಲಿ ಮೂರು ನಾಲ್ಕು ತಿಂಗಳು ಸೆಟಲ್ ಆದರು ಈ ವೇಳೆ ಏನು ನಡೆದಿದೆ ಎಂದು ಹೇಳಲು ಆಗಲ್ಲ. ಆಗ ಮಾಡಿಸಿದ್ದು ಒಬ್ಬರು ಈಗ ಅದನ್ನು ಸಿಡಿ ಮಾಡಿ ಓಡಾಡುತ್ತಿರುವವರು ಬಾಬಾ ಎಂದು ಹಾಸ್ಯ ಮಾಡಿದರು.