ಬಾಗಲಕೋಟೆ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದವರನ್ನ ಉಪಚರಿಸುವ ಮೂಲಕ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಮಾನವೀಯತೆ ಮೆರೆದಿದ್ದಾರೆ.
ಆರ್.ಬಿ.ತಿಮ್ಮಾಪೂರ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಕಾರ್ಯಕರ್ತನ ಮದುವೆ ಮುಗಿಸಿಕೊಂಡು ವಾಪಸ್ ಬರುವ ವೇಳೆ ಬೆನಕಟ್ಟಿ ಹಾಗೂ ಸಂಗಮ ಕ್ರಾಸ್ ಬಳಿ ಬೈಕ್ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡಿದ್ದರು. ಇದನ್ನ ಗಮನಿಸಿದ ಅವರು, ಕಾರಿನಿಂದ ಇಳಿದು ಗಾಯಗೊಂಡವರಿಗೆ ನೀರು ಕುಡಿಸಿ ಉಪಚರಿಸಿದ್ರು. ಬಳಿಕ ಆ್ಯಂಬುಲೆನ್ಸ್ಗೆ ಕರೆ ಮಾಡಿ, ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕಳುಹಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗಾಯಗೊಂಡವರನ್ನ ಬಸವನ ಬಾಗೇವಾಡಿ ತಾಲೂಕಿನ ಅರಳದಿನ್ನಿ ಗ್ರಾಮದವರು ಎನ್ನಲಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.